ಕೈಗಾ ಬಾರೆ ರಸ್ತೆ ಮರ ಕಡಿತ ಸ್ಥಗಿತ

| Published : Jun 01 2024, 12:46 AM IST

ಸಾರಾಂಶ

ಕನ್ನಡಪ್ರಭ ಶುಕ್ರವಾರ ಮರ ಕಡಿತಕ್ಕೆ ವಿರೋಧ ವ್ಯಕ್ತವಾದ ಬಗ್ಗೆ ವಿವರವಾದ ವರದಿಯನ್ನೂ ಪ್ರಕಟಿಸಿತ್ತು.

ಕಾರವಾರ: ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಕೈಗಾದಿಂದ ಬಾರೆ ತನಕ ರಸ್ತೆ ಅಗಲೀಕರಣಕ್ಕಾಗಿ ಮಳೆಗಾಲದಲ್ಲಿ ನಡೆಸಲುದ್ದೇಶಿಸಿದ್ದ ಮರ ಕಟಾವಿಗೆ ತಡೆ ಬಿದ್ದಿದೆ.ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಮರ ಕಟಾವು ಸ್ಥಗಿತಕ್ಕೆ ಸೂಚನೆ ನೀಡಿದರು. ಇದರಿಂದ ಸದ್ಯಕ್ಕೆ ಮರ ಕಡಿತ ನಿಂತಂತಾಗಿದೆ. ಮಳೆಗಾಲದಲ್ಲಿ ಅಂದರೆ ಜೂನ್ 1ರಿಂದ ಅಕ್ಟೋಬರ್ ತನಕ ಖಾಸಗಿ ಭೂಮಿ ಸೇರಿದಂತೆ ಮರ ಕಟಾವು ಮಾಡಬಾರದೆಂದು ನಿಯಮ ಇದ್ದರೂ ಕೈಗಾದಿಂದ ಬಾರೆ ಕ್ರಾಸ್ ತನಕ 10.02 ಕಿಮೀ ರಸ್ತೆ ಅಗಲೀಕರಣಕ್ಕಾಗಿ ಮೇ 30ರಿಂದ ಜೂನ್ 10ರ ತನಕ 3500ರಷ್ಟು ಮರ ಕಡಿತ ಮಾಡಲು ಇಲಾಖೆ ಮುಂದಾಗಿತ್ತು. ಈ ಬಗ್ಗೆ ಪರಿಸರ ಬರಹಗಾರ ಶಿವಾನಂದ ಕಳವೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಸ್ತೆ ಅಗಲೀಕರಣ ಭೂಕುಸಿತ ವಲಯದಲ್ಲಿ ಬರುವುದರಿಂದ ಅಗಲೀಕರಣವನ್ನು ಕೈಬಿಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಕನ್ನಡಪ್ರಭ ಶುಕ್ರವಾರ ಮರ ಕಡಿತಕ್ಕೆ ವಿರೋಧ ವ್ಯಕ್ತವಾದ ಬಗ್ಗೆ ವಿವರವಾದ ವರದಿಯನ್ನೂ ಪ್ರಕಟಿಸಿತ್ತು. ಕಡಿತ ಸ್ಥಗಿತ: ಕೈಗಾ ಬಾರೆ ರಸ್ತೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲೆಡೆ ಮರ ಕಡಿತವನ್ನು ಸ್ಥಗಿತಗೊಳಿಸಲಾಗಿದೆ. ಈಗ ಕಡಿದ ಮರಗಳನ್ನು ಮಾತ್ರ ಸಾಗಾಟ ಮಾಡಲಾಗುವುದು ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು.

ಬದ್ಧತೆ ತೋರಲಿ: ಕಳಚೆಯಲ್ಲಿ ಬೇಸಿಗೆಯಲ್ಲಿ ಬೀಜದ ಉಂಡೆಗಳನ್ನು ಡ್ರೋಣ್ ಮೂಲಕ ಬಿತ್ತನೆ ಮಾಡಿದ್ದ ಅರಣ್ಯ ಇಲಾಖೆ ಈಗ ಅದೇ ಪರಿಸರದಲ್ಲಿ ನೈಸರ್ಗಿಕ ಕಾಡಿನ ಅಪರೂಪದ ಮರ ಉಳಿಸಲು ಅದೇ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ತಿಳಿಸಿದರು.