ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಆಯುಧ ಪೂಜೆ ಎಂದೇ ಕರೆಯಲಾಗುವ ಕೈಲ್ ಪೊಳ್ದ್ ಹಬ್ಬವನ್ನು ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಯಿತು.ಕೃಷಿಗೆ ಬಳಸುವ ಸಲಕರಣೆಗಳು, ಹಿರಿಯರು ಬಳಸುತ್ತಿದ್ದ ಬೇಟೆ ಆಯುಧಗಳನ್ನು ಸ್ವಚ್ಛ ಮಾಡಿ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದರು. ಹಬ್ಬದ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲಿ ಪಂದಿ ಕರಿ, ಕಡುಬು ಘಮಘಮಿಸಿತು. ಕುಟುಂಬಸ್ಥರೆಲ್ಲರೂ ಐನ್ ಮನೆಯಲ್ಲಿ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕೈಲ್ ಮುಹೂರ್ತ ಹಬ್ಬವನ್ನ ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನರಂಜನಾ ಹಬ್ಬವಾಗಿ ಆಚರಿಸುವುದು ಇಲ್ಲಿನ ವಾಡಿಕೆಯಾಗಿದ್ದು, ಕೃಷಿಗೆ ಪ್ರಧಾನ ಆದ್ಯತೆ ನೀಡಿರುವ ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಕೆಯಾದ ಉಪಕರಣಗಳಿಗೆ ಪೂಜೆ ಸಲ್ಲಿಸಿ ಈ ಹಬ್ಬ ಪ್ರಾರಂಭಿಸಲಾಯಿತು.ಕೊಡಗಿನಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸಂಪ್ರದಾಯವಿದೆ. ಮಹಿಳೆಯರು ಮತ್ತು ಪುರುಷರು ಮರಕ್ಕೆ ತೆಂಗಿನ ಕಾಯಿ ಕಟ್ಟಿ ಅದಕ್ಕೆ ಗುರಿ ಇಟ್ಟು ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅಲ್ಲದೆ ಕೊಡವ ಸಾಂಪ್ರದಾಯಿಕ ನೃತ್ಯ ಮಾಡುತ್ತಾ ಕೈಯಲ್ಲಿ ಬಂದೂಕು, ಕತ್ತಿ, ಗುರಾಣಿಗಳನ್ನು ಹಿಡಿದು ನೃತ್ಯ ಮಾಡುವ ಮೂಲಕ ಕೈಲ್ ಪೋಳ್ದ್ ಹಬ್ಬದಲ್ಲಿ ಖುಷಿ ಪಟ್ಟರು.
ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಕುಟುಂಬಸ್ತರೆಲ್ಲ ಸೇರಿ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಿದರು. ದೇವನೆಲೆಯಾದ ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ, ಓಡಿಕತ್ತಿ, ಗೆಜ್ಜೆತಂಡನಿಟ್ಟು ತೋಕ್ ಪೂ ಮೀದಿ ನೀರಿಟ್ಟು ಕುಟುಂಬದ ಹಿರಿಯರಾದ ನಿವೃತ್ತ ವಾಯುಸೇನಾಪಡೆ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಪೂಜೆ ಸಲ್ಲಿಸಿದರು. ಎಲ್ಲರಿಗೂ ಒಳಿತು ಮಾಡಲೆಂದು ಬೇಡಿಕೊಂಡರು. ಹಬ್ಬದ ವಿಶೇಷ ಭೋಜನದ ನಂತರ ಹಿರಿಯರು, ಕಿರಿಯರು, ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆದರು.ನಂತರ ನೆರೆಯ ಊರಿನವರು ಊರುಮಂದ್‌ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬಕ್ಕೆ ತೆರೆ ಬಿತ್ತು.
ಪೊನ್ನಂಪೇಟೆಯಲ್ಲಿ ಆಚರಣೆ:ಕೊಡವ ಹಿತರಕ್ಷಣಾ ಬಳಗ ಕ್ ಗ್ಗಟ್ಟ್ ನಾಡ್, ಪೊನ್ನಂಪೇಟೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರ, ಕೋವಿ, ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.
ಪದ್ಧತಿಯಂತೆ ಕೃಷಿ ಪರಿಕರಗಳಾದ ನೇಗಿಲು, ನೊಗಗಳಿಗೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್ ಕೊಡವ ಪದ್ಧತಿಯ ಕುಪ್ಯ ಚೇಲೆ ಧರಿಸಿ ಪೂಜೆ ಸಲ್ಲಿಸಿದರು.ಕೋವಿ ಕತ್ತಿಗಳಿಗೆ ಆಯುಧ ಪೂಜೆ ಮಾಡಿ ಕಾರೋಣವಿಗೆ ಹಾಗೂ ಬೇಟೆಯಲ್ಲಿ ಜೊತೆ ಸಾಗುವ ಶ್ವಾನಗಳಿಗೆ ಪದ್ಧತಿಯಂತೆ ಪ್ರತ್ಯೇಕವಾಗಿ ಎಡೆ ಇಡಲಾಯಿತು.
ವಾಹನಗಳನ್ನು ಸಾಮೂಹಿಕವಾಗಿ ಹೂವಿನ ಮಾಲೆಯಲ್ಲಿ ಅಲಂಕರಿಸಿ, ಆಯುಧ ಪೂಜೆ ಸಲ್ಲಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು.ನಂತರ ಕೋವಿಗಳನ್ನು ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಿ
‘ಹುಲಿ -ಹಂದಿ ಬರುವ ದಾರಿಯಿಂದ ಸರಿದು ಬೇಟೆಯಾಡು, ಶತ್ರುವನ್ನು ಕೆಣಕಬೇಡ, ಶತ್ರುವಿನೊಂದಿಗೆ ದಾರಿ ಎದುರು ನಿಂತು ಹೋರಾಡು, ಮಿತ್ರನಿಗೆ ಮಿತ್ರನ್ನಾಗಿ ಇರು, ದೇವರನ್ನು ಮರೆಯಬೇಡ’ ಎಂದು ಕೊಡವ ಭಾಷೆಯಲ್ಲಿ ಮಾತನಾಡಿ ಕೋವಿ ಹಸ್ತಾಂತರಿಸಲಾಯಿತು. ನಂತರ ಸಾಮೂಹಿಕವಾಗಿ ಆಕಾಶಕ್ಕೆ ಗುಂಡು ಹಾರಿಸಲಾಯಿತು. ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಸಲ್ಲಿಸಿ, ಪೊನ್ನಂಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಮೆರವಣಿಗೆ ನಡೆಯಿತು. ಹಬ್ಬದ ವಿಶೇಷ ಉಟೋಪಚಾರದಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿದ್ದರು.ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಅಡ್ಡoಡ ಡಾಲಿ ಜನಾರ್ಧನ, ಉಳುವಂಗಡ ಲೋಹಿತ್ ಭೀಮಯ್ಯ, ಪುಳ್ಳಂಗಡ ಪವನ್, ಕಳ್ಳಿಚಂಡ ಚಿಪ್ಪ ದೇವಯ್ಯ, ಅಜ್ಜಿಕುಟ್ಟಿರ ಶುಭಾ, ಅಜ್ಜಿಕುಟ್ಟಿರ ರಂಜಿ, ಚೇಯಂಡ ಶಮ್ಮಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಖಜಾಂಚಿ ಅಲೆಮಾಡ ಸುಧೀರ್, ನಿರ್ದೇಶಕ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಬಿದ್ದಪ್ಪ, ಕಮಲಾಕ್ಷಿ ಬಿದ್ದಪ್ಪ ಹಾಜರಿದ್ದರು.