ಸಾರಾಂಶ
ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ನೀರಿನ ಟ್ಯಾಂಕ್‌ಅನ್ನು ಬ್ಲೀಚಿಂಗ್ ಪೌಡರನಿಂದ ಸಿಂಪಡಿಸಿ, ಸ್ವಚ್ಛತೆಯಲ್ಲಿ ತೊಡಗಿರುವುದು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ತಾಲೂಕಿನ ಕಾಕಲವಾರ ಗ್ರಾಮದಲ್ಲಿ ಮಂಗಳವಾರ 4 ವಾಂತಿ-ಬೇಧಿ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 6 ಜನರು ತಾಲೂಕು ಆರೋಗ್ಯ ಕೇಂದ್ರ ಆಯೋಜಿಸಿದ ತಾತ್ಕಾಲಿಕ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸಿಬ್ಬಂದಿಯು ಸಂಗ್ರಹ ನೀರಿನ ಟ್ಯಾಂಕಿನಲ್ಲಿರುವ ನೀರನ್ನು ಖಾಲಿ ಮಾಡಿ ಸ್ವಚ್ಛತೆಗೊಳಿಸಿದ್ದಾರೆ. ಗ್ರಾಮದಲ್ಲೆಡೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿ, ಚರಂಡಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರು.
ಡೆಂಘೀ, ಮಲೇರಿಯಾ ಹಾಗೂ ಇನ್ನಿತರ ರೋಗಗಳು ಹರಡದಂತೆ ಗ್ರಾಮದ ರಸ್ತೆಗಳ ಮಧ್ಯೆ ಕಂದಕಗಳಲ್ಲಿ ಸಂಗ್ರಹ ಗೊಂಡಿರುವ ನೀರನ್ನು ಖಾಲಿ ಮಾಡಿದರು. ಚರಂಡಿ ಮೂಲಕ ಹಾದು ಹೋಗಿರುವ ನೀರಿನ ಪೈಪ್ ಲೈನ್ ದುರಸ್ತಿಗೆ ಮುಂದಾಗಿರುವುದು ಕಂಡುಬಂತು.ಗ್ರಾಮದಲ್ಲಿರುವ ಬೋರವೆಲ್ ನೀರಿನ ಮಾದರಿ ಪರೀಕ್ಷೆಯಲ್ಲಿ ಮಂಗಳವಾರದಂದು ಮತ್ತೆ ವರದಿ ಬಂದಿದ್ದು, ಒಟ್ಟು 7 ಬೋರವೆಲ್ ನೀರು ಕುಡಿಯಲು ಯೋಗ್ಯ ಅಲ್ಲ ಎಂಬ ವರದಿ ಬಂದಿರುವ ಹಿನ್ನೆಲೆ ಗ್ರಾಮ ಪಂಚಾಯ್ತಿ ಜನರಿಗೆ ಕುಡಿಯಲು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಡಾವಣೆಗೆ ಬರುವ ಟ್ಯಾಂಕರ್ ನೀರನ್ನು ಗ್ರಾಮಸ್ಥರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುದಿಸಿ, ಆರಿಸಿ ನೀರು ಕುಡಿಯುವಂತೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಲಹೆ ನೀಡಿದರು.