ಕಾಕರ್ಲತೋಟದ ಕ್ಯಾದಿಗೆ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ

| Published : Sep 15 2024, 01:58 AM IST

ಕಾಕರ್ಲತೋಟದ ಕ್ಯಾದಿಗೆ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಗ್ಗರ ಹಟ್ಟಿಯ ಬಳಿ ಮುಖ್ಯ ರಸ್ತೆ (ಬಳ್ಳಾರಿ-ಬೆಂಗಳೂರು)ಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತ ಆಗುತ್ತಿದೆ.

ಬಳ್ಳಾರಿ: ನಗರದ 5ನೇ ವಾರ್ಡಿನ ಕಾಕರ್ಲತೋಟ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ವಿಶೇಷ ಅನುದಾನದ ಅಡಿ ಅಂದಾಜು ₹8 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕ್ಯಾದಿಗೆ ಹಳ್ಳದ ಸೇತುವೆ ಹಾಗೂ ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗುಗ್ಗರ ಹಟ್ಟಿಯ ಬಳಿ ಮುಖ್ಯ ರಸ್ತೆ (ಬಳ್ಳಾರಿ-ಬೆಂಗಳೂರು)ಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತ ಆಗುತ್ತಿದೆ. ಈ ನೂತನ ಸೇತುವೆಯ ನಿರ್ಮಾಣದಿಂದ ಟ್ರಾಫಿಕ್ ಜಾಮ್ ತಗ್ಗಲಿದೆ. ಅಲ್ಲದೆ, ಬಳ್ಳಾರಿ ನಗರ ಕೇಂದ್ರದಿಂದ ಕಾಕರ್ಲತೋಟದ ಭಾಗಕ್ಕೆ ಸಂಚರಿಸುವ ಜನರಿಗೂ ಅನುಕೂಲ ಆಗಲಿದೆ ಎಂದರು.

ಸೇತುವೆ ಕಾಮಗಾರಿಯ ಹೊರತಾಗಿ 5ನೇ ವಾರ್ಡಿನ ರಸ್ತೆ ಅಭಿವೃದ್ಧಿಗಾಗಿ ₹75 ಲಕ್ಷ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ 5ನೇ ವಾರ್ಡಿನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.

ಕಾಮಗಾರಿಗೆ ಚಾಲನೆ:

3ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ಒಳಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ (₹4.19 ಕೋಟಿ ವೆಚ್ಚ, ಸಿಸಿ ರಸ್ತೆ) ಚಾಲನೆ ನೀಡಿದ ನಗರ ಶಾಸಕ ನಾರಾ ಭರತ್ ರೆಡ್ದಿ, ಎಪಿಎಂಸಿಯ ಪಕ್ಕದ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹೊರ ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರಿಂದ ಅಹವಾಲು ಸ್ವೀಕರಿಸಿದರು.

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈಗಾಗಲೇ ಒವರ್‌ಹೆಡ್ ಟ್ಯಾಂಕ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹೊರ ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಬಳಿಕ ನಗರದ 8ನೇ ವಾರ್ಡಿನ ಹಂದ್ರಾಳ ಪ್ರದೇಶದಲ್ಲಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು. ತದನಂತರ ನೂತನ ನಿರ್ಮಾಣ ಹಂತದಲ್ಲಿ ಚಾಲ್ತಿಯಲ್ಲಿರುವ ಹಂದ್ರಾಳ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.

ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ರಾಜಶೇಖರ ಹಡ್ಲಿಗಿ, ಎಂ. ಪ್ರಭಂಜನಕುಮಾರ್, ರಾಮಾಂಜನೇಯ, ವಿಜಯ್, ಅನೂಪ್ ಹಾಜರಿದ್ದರು.