ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಜಮೀನು ವಿಷಯವಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ನೀಡಲು ಆಗ್ರಹಿಸಿ ಶುಕ್ರವಾರ ಕಾಕತಿ ಪೊಲೀಸ್ ಠಾಣೆಗೆ ಎದುರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕುವ ಯತ್ನ ನಡೆದಿದೆ. ಕಾಕತಿಯಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಕಾಕತಿ ಗ್ರಾಮದ ಅನಿಲ ಮುಂಗಾರಿ ಎಂಬುವರು ಜಮೀನು ಉಳುಮೆ ಮಾಡಿಕೊಂಡು ಬಂದಿದ್ದರು. ಆದರೆ ಅದೇ ಗ್ರಾಮದ ತುಂಬರಿ ಕುಟುಂಬಸ್ಥರ ಹೆಸರಿನಲ್ಲಿ ಜಮೀನಿನ ದಾಖಲೆಗಳಿರುವುದರಿಂದ ಮುಂಗಾರಿ ಕುಟುಂಬಸ್ಥರು ಜೂ.1 ರಂದು ಖಬ್ಜಾ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಮುಂಗಾರಿ ಹಾಗೂ ತುಂಬರಿ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎರಡು ಕುಟುಂಬಸ್ಥರಿಂದ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿತ್ತು.ಈ ದೂರಿಗೆ ಸಂಬಂಧಿಸಿದಂತೆ ತುಂಬರಿ ಕುಟುಂಬಸ್ಥರನ್ನು ಇದುವರೆಗೆ ಬಂಧಿಸಿಲ್ಲ ಎಂದು ಅಸಮಾಧಾನಗೊಂಡ ಮುಂಗಾರಿ ಕುಟುಂಬಸ್ಥರು ಹಾಗೂ ಗ್ರಾಮದ ಕೆಲವರು ಕಾಕತಿ ಠಾಣೆಗೆ ಆಗಮಿಸಿ ಕೆಲ ಸಮಯ ಪ್ರತಿಭಟನೆ ನಡೆಸಿ, ಬಳಿಕ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ಮನವೊಲಿಸಲು ಯತ್ನಿಸಲು ಮುಂದಾದರೂ ಸೊಪ್ಪು ಹಾಕದ ಪ್ರತಿಭಟನಾಕಾರರು ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವಿಷಯ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಕಾಕತಿ ಪೊಲೀಸ್ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಆಸ್ತಿ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಿ,. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ತಿಳಿಸಿದ್ದರಿಂದ ಪ್ರತಿಭಟನೆ ಕೈ ಬಿಟ್ಟರು.