ಸಾರಾಂಶ
ತಗಡೂರು ಗ್ರಾಮದ ನೂರಾರು ರೈತರ ಹೊಲ, ಗದ್ದೆ, ಜಮೀನು ಕೂಡ ಆ ಗ್ರಾಮಕ್ಕೆ ಹೊಂದಿಕೊಂಡಂತೆ ಇವೆ. ರೈತರು ಜಮೀನುಗಳಿಗೆ ಬೈಕ್, ಸ್ಕೂಟರ್ ಗಳಲ್ಲಿ ತೆರಳುವಾಗ ಬಿದ್ದು ಗಾಯಗೊಂಡಿರುವ ಹಲವು ನಿದಶರ್ನಗಳಿವೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ತಗಡೂರು ಗ್ರಾಮದ ಸಮೀಪದ ಕಕ್ಕರಹಟ್ಟಿ ಗ್ರಾಮದ ರಸ್ತೆ ಕೆಸರಿನ ಗದ್ದೆಯಂತಾಗಿದ್ದು ವಾಹನ ಸವಾರರು ಹರ ಸಾಹಸ ಪಡುವಂತಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಈ ಕಕ್ಕರಹಟ್ಟಿ (ಮಠದ ತೋಟ) ಗ್ರಾಮದಲ್ಲಿ ಸುಮಾರು 15 ದಲಿತ ಕುಟುಂಬಗಳು ವಾಸವಿದ್ದು, ಪ್ರತಿಯೊಂದು ಸವಲತ್ತಿಗೂ ಅನಿವಾಯ೯ ಮತ್ತು ಅವಶ್ಯಕವಾಗಿ ತಗಡೂರು ಗ್ರಾಮಕ್ಕೆ ಬರಲೇಬೇಕಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದರಂತೂ ಇಲ್ಲಿ ಓಡಾಡಲು ಸಾಧ್ಯವೇ ಇಲ್ಲ. ಅಲ್ಲದೆ ಈ ರಸ್ತೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇಷ್ಟು ಸಂಕಷ್ಟಗಳ ನಡುವೆ ನಾವು ಜೀವನ ಸಾಗಿಸುವುದು ಹೇಗೆ ಎಂಬುದು ಗ್ರಾಮಸ್ಥರ ಪ್ರಶ್ನೆ.ತಗಡೂರು ಗ್ರಾಮದ ನೂರಾರು ರೈತರ ಹೊಲ, ಗದ್ದೆ, ಜಮೀನು ಕೂಡ ಆ ಗ್ರಾಮಕ್ಕೆ ಹೊಂದಿಕೊಂಡಂತೆ ಇವೆ. ರೈತರು ಜಮೀನುಗಳಿಗೆ ಬೈಕ್, ಸ್ಕೂಟರ್ ಗಳಲ್ಲಿ ತೆರಳುವಾಗ ಬಿದ್ದು ಗಾಯಗೊಂಡಿರುವ ಹಲವು ನಿದಶ೯ನಗಳಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವಷ೯ ಕಳೆದರೂ ಕೂಡ ಕಕ್ಕರಹಟ್ಟಿ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯ ಇನ್ನೂ ಮರೀಚಿಕೆಯಾಗಿವೆ.
ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರದ ಕಥೆಯೇ ಹೀಗಾದರೆ ಬೇರೆ ಕ್ಷೇತ್ರಗಳ ಗ್ರಾಮದ ಕಥೆ ಹೇಗೆ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ. ಮುಂದೆಯಾದರೂ ಕೂಡ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆ ಗಮನಹರಿಸಿ ಗ್ರಾಮದ ರಸ್ತೆ ಡಾಂಬರೀಕರಣ ಮಾಡಿ ಅಭಿವೃದ್ದಿ ಪಡಿಸುವರೋ ಎಂದು ಗ್ರಾಮಸ್ಥರು ಕಾತರದಿಂದ ಕಾದಿದ್ದಾರೆ.