ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಕೋಟುಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭ ಗುರುವಾರ ನೆರವೇರಿತು.ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಚೌರಿರ ಜಗತ್ ತಿಮ್ಮಯ್ಯ ಮಾತನಾಡಿ, ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಸಹಕರಿಸುತ್ತದೆ ಎಂದರು. ಶಿಬಿರ ಉದ್ಘಾಟಿಸಿದ ಕಾಕೋಟ್‌ಪರಂಬು ಗ್ರಾ.ಪಂ. ಅಧ್ಯಕ್ಷ ಭಟ್ಟಕಾಳಂಡ ಕಾಮಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕಾರ, ಶಿಸ್ತು, ರಾಷ್ಟ್ರಭಕ್ತಿ ಬಳಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.
ಕಾಕೋಟು ಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಸಿ ವಿದ್ಯಾ ಮಾತನಾಡಿದರು.ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಕಿ ಪ್ರಾಸ್ತಾವಿಕ ಮಾತನಾಡಿದರು.
ಮೂರ್ನಾಡು ವಿದ್ಯಾ ಸಂಸ್ಥೆ ನಿರ್ದೇಶಕ ಮುಂಡಂಡ ನಂದ ಚಂಗಪ್ಪ ಶಿಬಿರ ಧ್ವಜಾರೋಹಣ ನೆರವೇರಿಸಿದರು.ಮೂರ್ನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ನಂದೇಟಿರ ರಾಜಾ ಮಾದಪ್ಪ, ಕಾಕೋಟು ಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಂಕೀತ, ಮೂರ್ನಾಡು ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ನಿರ್ದೇಶಕ ಕೆರೆಮನೆ ರಾಮಮೂರ್ತಿ, ಕಾಕೋಟು ಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಾಲತಿ ಹಾಗೂ ಚೊಂದಮ್ಮ ಇದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ದಮಯಂತಿ ಸ್ವಾಗತಿಸಿದರು. ಕುಮುದ ವಂದಿಸಿದರು.