18, 19ರಂದು ಶಿವಪ್ಪ ನಾಯಕ ಅರಮನೆಯಲ್ಲಿ ಕಲಾ ದಸರಾ

| Published : Oct 14 2023, 01:00 AM IST

ಸಾರಾಂಶ

18ರಂದು ಬೆಳಗ್ಗೆ 10 ಗಂಟೆಗೆ ಅರಮನೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಕಲಾದಸರಾಕ್ಕೆ ಚಾಲನೆ:
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾ ಅಂಗವಾಗಿ ಅ.18ರಿಂದ 20 ರವರೆಗೆ ಮೂರು ದಿನಗಳ ಕಾಲ ಶಿವಪ್ಪ ನಾಯಕ ಅರಮನೆ ಅವರಣದಲ್ಲಿ ಕಲಾ ದಸರಾ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಕಲಾ ದಸರಾದಲ್ಲಿ ವಿಶೇವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾವನ್ನು ಆಯೋಜಿಸಲಾಗಿದೆ ಎಂದು ಕಲಾ ದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರಳೀಧರ್‌ ಹೇಳಿದರು. ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಲಾ ಜಾಥಾ, ವಿವಿಧ ಜಾನಪದ ಕುಣಿತ, ವೇಣುವಾದನ, ಮನರಂಜನಾ ಕಾರ್ಯಕ್ರಮ ಜರುಗಲಿದೆ. ವಿಶೇಷವಾಗಿ ಅ.20ರಂದು ಕುವೆಂಪು ರಂಗಮಂದಿರಲ್ಲಿ ಆಯೋಜಿಸಿರುವ ಜ್ಞಾನ ದಸರಾದಲ್ಲಿ ಸಮನ್ವಯ ಟ್ರಸ್ಟ್‌ ಸಂಯೋಜನೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಒಂದು ದಿನದ ತರಬೇತಿ ನಡೆಯಲಿದೆ ಎಂದು ತಿಳಿಸಿದರು. ಡಿಸಿ ಅವರಿಂದ ಚಾಲನೆ: 18ರಂದು ಬೆಳಗ್ಗೆ 10 ಗಂಟೆಗೆ ಅರಮನೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಕಲಾದಸರಾಕ್ಕೆ ಚಾಲನೆ ನೀಡಿ, ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು. ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಉದ್ಘಾಟಿಸುವರು. ಉಪವಿಭಾಗಾಧಿಕಾರಿ ಸತ್ಯನಾರಾಯಣ, ಮೇಯರ್ ಶಿವಕುಮಾರ್, ಆಯುಕ್ತ ಮಾಯಣ್ಣಗೌಡ ಮತ್ತು ಸಮಿತಿಯ ಸದಸ್ಯರು ಹಾಜರಿರುವರು ಎಂದರು. ಸಂಜೆ 4 ಗಂಟೆಗೆ ಶಿವಪ್ಪ ನಾಯಕ ವೃತ್ತದಿಂದ ಕಲಾ ಜಾಥಾ ಆರಂಭವಾಗಲಿದೆ. ಕಲಾತಂಡಗಳಾದ ಮಹಿಳಾ ಡೊಳ್ಳು, ವೀರಗಾಸೆ, ದೇವಿ ವೇಷಧಾರಿ, ಕೀಲುಕುದುರೆ ಮೊದಲಾದ ತಂಡದವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಗಾಂಧಿ ಬಜಾರ್ ಮಾರ್ಗವಾಗಿ ಮೆರವಣಿಗೆ ಸಾಗಿ ಶಿವಪ್ಪ ನಾಯಕ ಅರಮನೆ ಸೇರಲಿದೆ. ಬಳಿಕ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದರು. ಗೊಂಬೆಗಳ ವ್ಯವಸ್ಥೆ: ಕಲಾ ದಸರಾದಲ್ಲಿ ಇದೇ ಮೊದಲ ಬಾರಿಗೆ ಶಿವಪ್ಪ ನಾಯಕ ಅರಮನೆ ಮೈದಾನದಲ್ಲಿ ಗೊಂಬೆಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಜನರೇ ಗೊಂಬೆಗಳನ್ನು ತರಬಹುದು. ತರಲು ಸಾಧ್ಯವಾಗದವರು ಲೀಲಾ (8722375475), ನಳೀನಾ (9481564343) ಇವರನ್ನು ಸಂಪರ್ಕ ಮಾಡಿದರೆ ಇವರೇ ಬಂದು ಗೊಂಬೆಗಳನ್ನು ತೆಗೆದುಕೊಂಡು ಬರುತ್ತಾರೆ. ಅವರ ಗೊಂಬೆ ಕೆಳಗೆ ಅವರ ಹೆಸರು ನಮೂದಿಸಿ ಪ್ರದರ್ಶನಕ್ಕೆ ಇಡಲಾಗುವುದು. ಪ್ರದರ್ಶನ ಬಳಿಕೆ ಅವರವರ ಗೊಂಬೆಗಳನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಜಯಶ್ರೀ ಶ್ರೀಧರ್ ಅವರಿಂದ ಗೊಂಬೆಗಳ ಪ್ರದರ್ಶನ ನಡೆಯಲಿದ್ದು, ರಾಮನ್ ಸಹೋದರಿಯರಿಂದ ವೀಣಾ ವೈವಿಧ್ಯ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಗಾಯಕಿ ಸುರೇಖಾ ಹೆಗಡೆ ಉದ್ಘಾಟಿಸುವರು. ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಶಾಸಕ ಎಸ್ .ಎನ್. ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿರುವರು ಎಂದು ತಿಳಿಸಿದರು. 19ರಂದು ಸಂಜೆ 5 ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ಭಜನಾಮೃತ, ಹರಿಕಥೆ, ಮಾತನಾಡುವ ಗೊಂಬೆ ಪ್ರದರ್ಶನ, ವೇಣುವಾದನ ನಡೆಯಲಿದೆ. ಸುಮಾರು 100 ಜನರು ಏಕಕಂಠದಲ್ಲಿ ಭಜನೆಗಳನ್ನು ಹಾಡುವರು. ಪ್ರತಿಮಾ ಕೋಡೂರು ಅವರು ತಾಟಕಿ ಸಂಹಾರ ಬಗ್ಗೆ ಹರಿಕಥೆ ಮಾಡುವರು. ಮೈಸೂರಿನ ಸುಮಾ ರಾಜಕುಮಾರ್ ಮಾತನಾಡುವ ಗೊಂಬೆ ಪ್ರದರ್ಶನ ನೀಡುವರು. ಆನಂದ ರಾಮ್ ಭಟ್, ಶ್ರೀಧರ್ ತಂಡದವರು ವೇಣುವಾದನ ನಡೆಸಿಕೊಡುವರು ಎಂದು ವಿವರಿಸಿದರು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಹಾಲಾಡಿ ಉದ್ಘಾಟಿಸುವರು. ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್. ಅರುಣ್, ಎಸ್.ರುದ್ರೇಗೌಡ, ಮೇಯರ್ ಎಸ್‌.ಶಿವಕುಮಾರ್‌, ಆಯುಕ್ತರು ಮಾಯಣ್ಣ ಗೌಡ ಪಾಲ್ಗೊಳ್ಳುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಲಾ ದಸರಾದ ಸದಸ್ಯ ಕಾರ್ಯದರ್ಶಿ ಎ.ಪಿ.ಶಶಿಧರ್, ಸದಸ್ಯರಾದ ಕಲ್ಪನಾ ರಮೇಶ್, ಭಾನುಮತಿ ವಿನೋದಕುಮಾರ್ ಶೇಟ್, ಲೀಲಾ, ಕೆ.ಜಿ.ವೆಂಕಟೇಶ್, ಜಾಫರ್ ಶರೀಫ್ ಮತ್ತಿತರು ಇದ್ದರು. - - - -13ಎಸ್‌ಎಂಜಿಕೆಪಿ03: ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಲಾ ದಸರಾ ಸಮಿತಿಯ ಅಧ್ಯಕ್ಷೆ ಸುರೇಖಾ ಮುರಳೀಧರ್‌ ಮಾತನಾಡಿದರು.