ಸಾರಾಂಶ
ಬೆಂಗಳೂರು : ಮಲ್ಲೇಶ್ವರಂನ ಸೇವಾಸದನ್ ಸಭಾಂಗಣದಲ್ಲಿ ಇಂಟರ್‌ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥಾಪಕರೂ ಆದ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಅವರು ತೃತೀಯ ಲಿಂಗಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಆಯೋಜಿಸಿದ್ದ ‘ಕಲಾ ಮಂಗಳ ಉತ್ಸವ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಶಾಸ್ತ್ರೀಯ ನ್ಯತ್ಯಗಾರ್ತಿ ಲಕ್ಷ್ಮಿ ಗೋಪಾಲಸ್ವಾಮಿ ಮಾತನಾಡಿ, ಶಾಸ್ತ್ರೀಯ ಕಲೆಗಳ ಮೂಲಕ ತೃತೀಯ ಲಿಂಗಿ ಸಮುದಾಯಕ್ಕೆ ಹೊಸ ಆಯಾಮ ನೀಡಲಾಗಿದೆ. ಲಿಂಗ ಸಮಾನತೆ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವಲ್ಲಿ ಇಂತಹ ಹಬ್ಬಗಳ ಪಾತ್ರ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀವತ್ಸ ಶಾಂಡಿಲ್ಯ ಮಾತನಾಡಿ, ತೃತೀಯ ಲಿಂಗಿ ಶಾಸ್ತ್ರೀಯ ನೃತ್ಯಗಾರರ ಪ್ರತಿಭೆ ಅನಾವರಣಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ. ಈ ಉತ್ಸವದ ಯಶಸ್ಸು ಭವಿಷ್ಯದ ಪೀಳಿಗೆಗೆ ಭರವಸೆ ನೀಡಿದ್ದು ಸ್ಫೂರ್ತಿಯ ದೀಪವಾಗಲಿದೆ ಎಂದು ಬಣ್ಣಿಸಿದರು.
ನಟಿ ಅನು ಪ್ರಭಾಕರ್, ಕಲಾವಿದ ಸತ್ಯನಾರಾಯಣ ರಾಜು, ಪದ್ಮ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್, ನಿವೃತ್ತ ಐಎಎಸ್ ಅಧಿಕಾರಿ ನಾಗಾಂಬಿಕಾ ದೇವಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೈಷ್ಣವಿ, ಸೆಲ್ವಿ ಸಂತೋಸಮ್, ರೇಖಾ, ರೋಸ್, ಓಮನಾ, ಕಾರ್ತಿ ಮತ್ತಿತರ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಬಿಬಿಎಂಪಿ ಉಪ ಆಯುಕ್ತ ಮಂಜುನಾಥ್ ಸ್ವಾಮಿ ಅವರು ಇದೇ ಸಂದರ್ಭದಲ್ಲಿ ಅರ್ಹ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.