ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣ ಗಣನೆ ಶುರುವಾಗಿದೆ. ಮಂದಿರದಲ್ಲಿನ ರಾಮಲಲ್ಲಾ ವಿಗ್ರಹ ಕರುನಾಡಿನ ಶಿಲ್ಪಿ ಅರುಣ ಕೆತ್ತನೆ ಎಂಬುವುದು ಅದಾಗಲೇ ಹೆಮ್ಮೆಯ ಸಂಗತಿಯಾಗಿತ್ತು. ಇದೀಗ ರಾಮ ಜನ್ಮಭೂಮಿ ಟ್ರಸ್ಟ್ ಸಿದ್ಧಪಡಿಸಿರುವ ಆಹ್ವಾನ ಪತ್ರಿಕೆಯಲ್ಲಿ ಬಳಸಲಾಗಿರುವ ರಾಮನ ಚಿತ್ರವಿರುವ ಲೋಗೋ ಕಲಬುರಗಿ ಕಲಾವಿದರ ಕೈಚಳಕಿದಂದ ಸಿದ್ಧಗೊಂಡಿರೋದು ಬೆಳಕಿಗೆ ಬಂದಿದೆ.
ಹೀಗಾಗಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಪ್ರಸಂಗದ ಹಿನ್ನೆಲೆ ಕರುನಾಡು ಹೆಮ್ಮೆಯಿಂದ ಬೀಗುವಂತಾಗಿದೆ. ಅಯೋಧ್ಯೆ ಆಮಂತ್ರಣ ಪತ್ರದಲ್ಲಿನ ಲೋಗೋ ಕಲಬುರಗಿಯಲ್ಲಿ ರಚನೆಯಾಗಿದ್ದು, ತೇಜೋಮಯನಾದಂತಹ, ಸೂರ್ಯನ ಒಡಲಲ್ಲಿ ಕಂಗೊಳಿಸುತ್ತಿರುವಂತಹ ರಾಮದೇವರ ಲೋಗೋವನ್ನು ಇಲ್ಲಿನ ಕಲಾವಿದ ರಮೇಶ್ ತಿಪ್ಪನೂರ್ ರಚಿಸುವ ಮೂಲಕ ಕಲಬುರಗಿ ಕೀರ್ತಿ ಜಗದಗಲ ಪಸರಿಸುವಂತೆ ಮಾಡಿದ್ದಾರೆ.ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ ಪತ್ರಿಕೆ ಸೇರಿ ತನ್ನೆಲ್ಲ ಮುಂದಿನ ಕೆಲಸಗಳಿಗಾಗಿ ಲೋಗೋ ಸಿದ್ಧಪಡಿಸಲು ಕಲಾವಿದರಿಗೆ ಆಹ್ವಾನ ನೀಡಿತ್ತು. ಈ ಆಹ್ವಾನಕ್ಕೆ ಸ್ಪಂದಿಸಿ ದೇಶದ ನೂರಾರು ಕಲಾವಿದರು ಲೋಗೋ ಸಿದ್ಧಪಡಿಸಿ ಟ್ರಸ್ಟ್‌ಗೆ ಒಪ್ಪಿಸಿದ್ದರು.
ಆದರೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಸದಸ್ಯರೆಲ್ಲರಿಗೆ ಮೆಚ್ಚುಗೆಯಾಗಿದ್ದು ಕಲಬುರಗಿ ಕಲಾವಿದನ ಕೈ ಚಳಕದಿಂದ ಮೂಡಿ ಬಂದ ರಾಮನ ಲೋಗೋ. ಇದೇ ಲೋಗೋ ಅಂತಿಮಗೊಳಿಸಿದ ಟ್ರಸ್ಟ್ ಮಂದಿರ ಆಹಾವ ಪತ್ರಿಕೆಯಲ್ಲಿ ಅದನ್ನೇ ಮುದ್ರಿಸಿ ಹಂಚಿಕೆ ಮಾಡಿದೆ.ಮೇಲೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂದು ಬರೆದು ಒಳಗಡೆ ರಾಮದೇವರ ಮೂರ್ತಿ, ಕೆಳಗಡೆ ರಾಮ ಜನ್ಮಭೂಮಿ ಟ್ರಸ್ಟ್ ಎಂದು ಬರೆದಿರುವ ಲೋಗೋ ಸುತ್ತಲೂ ಇರುವ ಅಂಚಿನಲ್ಲಿ ದೇದೀಪ್ಯಮಾನ ಬೆಳಕಲ್ಲಿ ರಾಮ ಎದ್ದು ಬರುತ್ತಿದ್ದಾನೇನೋ ಎಂಬಂತೆ ಲೋಗೋ ರಚಿಸಲಾಗಿದ್ದು ಬಹು ಆಕರ್ಷಕವಾಗಿದೆ.
ಪ್ರಕಾಶಿಸುತ್ತಿರುವ ಸೂರ್ಯ ಭಗವಾನನ ಮಧ್ಯದಲ್ಲಿ ಕಂಗೊಳಿಸುತ್ತಿರುವ ರಾಮ, ರಾಮನ ಎಡಬಲದಲ್ಲಿ ಕೆಳಭಾಗದಲ್ಲಿ ಕುಳಿತಿರುವ ಹನುಮಂತನ ಚಿತ್ರವಿದೆ. ಕೇಸರಿ, ಹಳದಿ, ಕಂಪು ಬಣ್ಣ ಬಳಸಿ ಈ ತೇಜೋಮಯ ರಾಮನ ಲೋಗೋ ಸಿದ್ಧಪಡಿಸುವ ಮೂಲಕ ಕಲಬುರಗಿ ಕಲಾವಿದ ರಮೇಶ ತಿಪನೂರ್ ಕಲಬುರಗಿ ಹಿರಿಮೆ ಹೆಚ್ಚಿಸಿದ್ದಾರೆ.ವಿಶ್ವ ಹಿಂದು ಪರಿಷತ್ ಮುಖಂಡರು ಹಾಗೂ ರಾಮ ಮಂದಿರ ಟ್ರಸ್ಟ್‌ನ ರಾಮ ಮಂದಿರ ನಿರ್ಮಾಣ ಕೆಲಸಕಾರ್ಯಗಳ ಉಸ್ತುವಾರಿ ಪ್ರಮುಖರಾಗಿರುವ ಗೋಪಾಲ್ ಜಿ ಇವರ ಮೂಲಕ ಕಲಬುರಗಿ ಕಲಾವಿದ ಮೇಶ ತಿಪನೂರ್ ರಚಿಸಿರೋ ಲೋಗೋ ಅಯೋಧ್ಯೆ ತಲುಪಿ ಆಯ್ಕೆ ಕೂಡಾ ಆಗಿರೋದು ಕಲಬುರಗಿಯ ಜನತೆ ಹೆಮ್ಮೆ ಪಡುವಂತೆ ಮಾಡಿದೆ.
ಆಹ್ವಾನ ಪತ್ರಿಕೆಯ ಲೋಗೋ ಹೀಗಿದೆ: ಪ್ರಕಾಶಿಸುವ ಸೂರ್ಯನ ಮಧ್ಯೆ ಕಂಗೊಳಿಸುವ ಶ್ರೀರಾಮನ ಭಾವಚಿತ್ರ. ಕೆಳಭಾಗದಲ್ಲಿ ಕುಳಿತಿರುವ ಹನುಮಂತನ ಚಿತ್ರ. ಈ ರೀತಿಯಾದ ಲೋಗೋವನ್ನು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಅವರು ಡಿಸೈನ್ ಮಾಡಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ತಲುಪಿಸಿದ್ದರು. ಸಾವಿರಾರು ಲೋಗೊಗಳ ಮಧ್ಯೆ ನಾನು ರಚಿಸಿದ ಲೋಗೊ ಆಯ್ಕೆ ಸಂತಸ ತಂದಿದೆ, ನಮ್ಮದೇ ಆಗಿರುವ ಬಂಧು ಪ್ರಿಂಟರ್ಸ್‌ನಲ್ಲಿ ಲೋಗೋ ವಿನ್ಯಾಸ ಮಾಡಲಾಗಿದೆ. ಪ್ರಭು ಶ್ರೀರಾಮನ ಆಶಿರ್ವಾದದಿಂದ ಲೋಗೋ ರಚನೆ ಸೌಭಾಗ್ಯ ನನ್ನದಾಗಿದೆ. ಲೋಗೋ ರಚಿಸಲು ವಿಶ್ವ ಹಿಂದೂ ಪರಿಷತ್ ಪ್ರಮುಖರು ಸಲಹೆ ನೀಡಿದ್ದರು. ಅದಕ್ಕಾಗಿ ನಾನು ತಿಂಗಳಿನಿಂದ ಲೋಗೋ ವಿನ್ಯಾಸದಲ್ಲಿ ತೊಡಗಿದ್ದೆ. ಇದೀಗ ರಾಮ ಮಂದಿರ ಟ್ರಸ್ಟ್ ನಾನು ವಿನ್ಯಾಸ ಮಾಡಿದ ಲೋಗೋವನ್ನೇ ಬಳಸಿರೋದು ಖುಷಿ ಕೊಟ್ಟಿದೆ. ಈ ಕೀರ್ತಿ ನನಗೆ ಮತ್ತು ಕುಟುಂಬಕ್ಕೆ ಅಷ್ಟೇ ಅಲ್ಲ ಇಡೀ ಕಲಬುರಗಿ ಜನತೆಗೆ ಸಲ್ಲುತ್ತದೆ- ರಮೇಶ ತಿಪನೂರ್, ರಾಮ ಮಂದಿರ ಲೋಗೋ ರಚಿಸಿದ ಕಲಾವಿದ, ಕಲಬುರಗಿ