ಸಾರಾಂಶ
ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಜ. 20 ರಂದು ಶನಿವಾರ ಆಳಂದ ತಾಲೂಕಿನ ಕೋಡ್ಲ ಹಂಗರ್ಗಾ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಮಹಾ ನಗರ ಪಾಲಿಕೆಯ ಮಾಜಿ ಮಹಾಪೌರರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಮೃತರಾವ್ ಪಾಟೀಲ್ ಕೋಡ್ಲಹಂಗರಗಾ ಅವರ ಪುತ್ರ ಮಹದೇವಪ್ಪ (46) ಪಾಟೀಲ್ ಅವರು ಶುಕ್ರವಾರ ಕಲಬುರಗಿಯಲ್ಲಿರುವ ವಿಜಯ ನಗರ ಬಡಾವಣೆಯ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತ ಮಹದೇವಪ್ಪ ಪಾಟೀಲರು ಪತ್ನಿ, ಇಬ್ಬರು ಪುತ್ರಿಯರು, ತಂದೆ- ತಾಯಿ ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಜ. 20 ರಂದು ಶನಿವಾರ ಆಳಂದ ತಾಲೂಕಿನ ಕೋಡ್ಲ ಹಂಗರ್ಗಾ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಪಾಟೀಲರ ಪರಿವಾರದ ಮೂಲಗಳು ತಿಳಿಸಿವೆ.
ಮೃತ ಮಹಾದೇವಪ್ಪಗೌಡರು ಉತ್ಸಾಹಿ ಯುವಕರಾಗಿದ್ದು, ಕಾಂಗ್ರೆಸ್ ಸಂಘನೆಯಲ್ಲಿ ತುಂಬ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು. ಸದಾಕಾಲ ಯುವಕರೊಂದಿಗೆ ಓಡಾಡಿಕೊಂಡಿದ್ದು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಕಂಬನಿ ಮಿಡಿದ್ದಾರೆ.ಶಾಸಕರಾದ ಅಲ್ಲಂಪ್ರಭು ಪಾಟೀಲರು ಇಲ್ಲಿನ ವಿಜಯ ನಗರ ಕಾಲೋನಿಯಲ್ಲಿರುವ ಮಾಜಿ ಮಹಾಪೌರ ಅಮೃತರಾವ ಪಾಟೀಲರ ನಿವಾಸಕ್ಕೆ ಭೇಟಿ ನೀಡಿ, ಮೃತರಾದ ಮಹಾದೇವಪ್ಪ ಪಾಟೀಲರ ಪಾರ್ಥೀವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಭಗವಂತ ಅಮೃತರಾವ ಪಾಟೀಲರ ಪರಿವಾರಕ್ಕೆ ಪುತ್ರ ವಿಯೋಗದ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಯುವ ಕಾಂಗ್ರೆಸ್ ಮುಖಂಡ ಮಹಾದೇವಪ್ಪ ಪಾಟೀಲರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್, ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಜಗದೇವ ಗುತ್ತೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾಫೈಲ್, ಮುಖಂಡರಾದ ನೀಲಕಂಠರಾವ ಮೂಲಗೆ, ಸಂತೋಷ ಪಾಟೀಲ್ ದಣ್ಣೂರ, ಅರುಣ ಪಾಟೀಲ್ ಕೊಡ್ಲಹಂಗರಗಾ, ಭೀಮರಾವ ಮೇಳಕುಂದಿ, ಮಹಾಂತೇಶ ಪಾಟೀಲ್, ಗೌಡಪ್ಪಗೌಡ ಪಾಟೀಲ್, ಶಾಸಕರ ಆಪ್ತ ಸಹಾಯಕ ವಿಜಯಕುಮಾರ್ ಯಳಸಂಗಿ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಸಕಲ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.