Kalaburagi jail illegality allegations: AIGP Reddy appointed to investigate
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಕಲುಬರಗಿ ಕೇಂದ್ರ ಕಾರಾಗೃಹದಲ್ಲಿ ಕೇಳಿ ಬಂದ ಅಕ್ರಮ ಚಟುವಟಿಕೆ ಆರೋಪ ಸಂಬಂಧ ವಿಚಾರಣೆಗೆ ಎಐಜಿಪಿ ಪಿ.ವಿ.ಆನಂದ್ ರೆಡ್ಡಿ ಅವರನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಜಿಪಿ ನೇಮಿಸಿದ್ದಾರೆ.ಕೆಲ ದಿನಗಳ ಹಿಂದೆ ಕಲುಬರಗಿ ಕಾರಾಗೃಹದಲ್ಲಿ ಕೈದಿಗಳು ಮದ್ಯಪಾನ ಹಾಗೂ ಧೂಮಪಾನ ವಿಡಿಯೋ ಬಹಿರಂಗವಾಗಿತ್ತು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಅವರು, ಈ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಎಐಜಿಪಿ ಅವರಿಗೆ ಸೂಚಿಸಿದ್ದಾರೆ. ಕಾರಾಗೃಹಕ್ಕೆ ಶುಕ್ರವಾರ ಆನಂದ ರೆಡ್ಡಿ ಭೇಟಿ ನೀಡಲಿದ್ದಾರೆ. ಈ ವಿಡಿಯೋ ಎರಡ್ಮೂರು ತಿಂಗಳ ಹಳೆಯದು. ಕಲುಬರಗಿ ಸೆಂಟ್ರಲ್ ಜೈಲಿನಲ್ಲಿದ್ದ ಬೆಂಗಳೂರಿನ ಮುನಿಕೃಷ್ಣ ಅಲಿಯಾಸ್ ಕಪ್ಪೆಗೆ ಅಕ್ರಮವಾಗಿ ಮದ್ಯ ಹಾಗೂ ಸಿಗರೇಟ್ ಪೂರೈಸಿರುವುದು ತಿಳಿದು ಬಂದಿದೆ. ಈ ಬಗ್ಗೆ ತಪ್ಪಿತಸ್ಥ ಅಧಿಕಾರಿ-ಸಿಬ್ಬಂದಿ ಬಗ್ಗೆ ಆನಂದ ರೆಡ್ಡಿ ವಿಚಾರಣೆ ನಡೆಸಲಿದ್ದಾರೆ ಎಂದು ಡಿಜಿಪಿ ಕಚೇರಿ ಪ್ರಕಟಣೆಯಲ್ಲಿ ಹೇಳಿದೆ.