ಸಾರಾಂಶ
ಸಜಾ ಹಾಗೂ ವಿಚಾರಮಾಧೀನ ಕೈದಿಗಳು ಗಾಂಜಾ, ಮೊಬೈಲ್ ಬಳಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸುದ್ದಿಯಲ್ಲಿರುವ ಇಲ್ಲಿನ ಕಲಬುರಗಿ ಸೆಂಟ್ರಲ್ ಜೈಲಿನಿಂದ ಹನಿಟ್ರ್ಯಾಪ್‌ನಂತಹ ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ : ಸಜಾ ಹಾಗೂ ವಿಚಾರಮಾಧೀನ ಕೈದಿಗಳು ಗಾಂಜಾ, ಮೊಬೈಲ್ ಬಳಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸುದ್ದಿಯಲ್ಲಿರುವ ಇಲ್ಲಿನ ಕಲಬುರಗಿ ಸೆಂಟ್ರಲ್ ಜೈಲಿನಿಂದ ಹನಿಟ್ರ್ಯಾಪ್‌ನಂತಹ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಹೀಗಾಗಿ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಬಂದೀಖಾನೆ ಇಲಾಖೆ ಇಡೀ ಜೈಲನ್ನೇ ಶುದ್ಧೀಕರಿಸಬೇಕೆಂಬ ಕೂಗು ಎದ್ದಿದೆ.
ಇಲ್ಲಿರುವ ಉಗ್ರನೊಬ್ಬ ಇತರ ಕೈದಿಗಳನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರು ಮಲ್ಲೇಶ್ವರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜೈಲಿನಲ್ಲಿರುವ ಉಗ್ರ ಜುಲ್ಫೀಕ್ ಹಾಗೂ ಶಿವಮೊಗ್ಗ ರೌಡಿ ಬಚ್ಚನ್ ಒಂದಾಗಿ ಈ ಕೃತ್ಯ ಎಸಗುತ್ತಿದ್ದಾರೆಂದು ಒಳಗಿರುವ ಸಜಾಕೈದಿ ಸಾಗರ್ ತಮ್ಮ ಪೋಷಕರಿಗೆ ನೀಡಿರುವ ಮಾಹಿತಿ ಬಂದೀಖಾನೆ ಇಲಾಖೆ ವ್ಯವಸ್ಥೆ ಬಯಲು ಮಾಡಿದೆ.
ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿರುವ ಸಾಗರ್ ಈ ಇಬ್ಬರೂ ಒಂದಾಗಿ ರಚಿಸಿದ ಹನಿಟ್ರ್ಯಾಪ್ ಗೆ ಒಳಗಾಗಿರುವುದಾಗಿ ಸಹೋದರನೊಂದಿಗೆ ಮಾಹಿತಿ ಹಂಚಿಕೊಂಡಿರುವುದು ಪ್ರಕರಣದ ಗಂಭೀರತೆ ಹೆಚ್ಚಿಸಿದೆ.
ಉಗ್ರ ಜುಲ್ಫೀಕರ್ ಮತ್ತು ರೌಡಿಶೀಟರ್ ಬಚ್ಚನ್ ಈ ಇಬ್ಬರು ಕೈದಿಗಳೊಂದಿಗೆ ಸಲುಗೆ ಬೆಳೆಸಿಕೊಂಡು ಅವರನ್ನು ಸೆಲ್‌ಗೆ ಕರೆದು ನಡೆಸುತ್ತಿರುವ ಈ ಕರಾಮತ್ತುಗಳು ಕಲಬುರಗಿ ಜೈಲಿಗೆ ಕೆಟ್ಟ ಹೆಸರು ತಂದಿವೆ. ಇತ್ತೀಚೆಗೆ ಸಾಗರ್ ಮನೆಯರ ಜತೆ ಮಾತನಾಡುವುದಕ್ಕೆ ತಮ್ಮದೇ ಮೊಬೈಲ್ ನೀಡಿದ್ದಾರೆ, ನಂತರ ಮಹಿಳೆ ಜೊತೆ ಮಾತನಾಡಿದರೆ ಆಕೆ ಬೆತ್ತಲಾಗುತ್ತಾಳೆ. ಈ ವೇಳೆ ನೀನೂ ಸಹ ಬೆತ್ತಲೆಯಾಗಿಯೇ ಮಾತನಾಡಬೇಕೆಂದು ಪುಸಲಾಯಿಸಿ ಬಳಿಕ ಅವರಿಬ್ಬರ ಸಂಭಾಷಣೆಯ ದೃಶ್ಯಾವಳಿ ಸ್ಕ್ರೀನ್ ಶಾಟ್ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಸ್ಕ್ರೀನ್ ಶಾಟ್ ಸಾಗರನಿಗೆ ತೋರಿಸಿ ₹50 ಸಾವಿರಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಸಾಗರ್ ತಿಳಿಸಿರುವುದು ಪ್ರಕರಣದ ಗಂಭೀರತೆ ಹೆಚ್ಚಿಸಿದೆ. ಜುಲ್ಫೀಕರ್ ಮತ್ತು ಬಚ್ಚನ್ ಜೋಡಿ ಜೈಲಿನ ಕೆಲವು ಸಿಬ್ಬಂದಿಗೂ ಇದೇ ರೀತಿ ವಿಡಿಯೋ ತುಣುಕು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಡಿಜಿಪಿ ಮಾಲೀನಿ ಭೇಟಿ: ವರದಿಗೆ 10 ದಿನಗಳ ಗಡವು
ಏತನ್ಮಧ್ಯೆ ಕಳೆದ 3 ದಿನಗಳ ಹಿಂದಷ್ಟೇ ಬಂದೀಖಾನೆ ಎಡಿಜಿಪಿ ಮಾಲೀನಿ ಕೃಷ್ಣಮೂರ್ತಿ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಒಳಗಿನ ಎಲ್ಲಾ ಸಂಗತಿಗಳನ್ನು ಪರಿಸೀಲಿಸಿದ್ದಾರೆ ಎನ್ನಲಾಗಿದೆ. ತನಿಖೆ ಮಾಡಿ 10 ದಿನಗಳಲ್ಲಿ ವರದಿಗೆ ಸೂಚಿಸಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಲಬುರಗಿ ಜೈಲು ಮುಂಚೆ ಕೈದಿಗಳ ಮನಃಪರಿವರ್ತನೆಯಂತಹ ಸುಧಾರಿತ ಕ್ರಮಗಳಿಂದಾಗಿ ರಾಜ್ಯದಲ್ಲಿ ಹೆಸರು ಮಾಡಿತ್ತು. ಇದೀಗ ಕೈದಿಗಳೇ ಇಲ್ಲಿ ಮೋಸ, ವಂಚನೆಯ ಕೆಲಸ ಮಾಡುತ್ತ , ಅದಕ್ಕೆ ಸಿಬ್ಬಂದಿಯೇ ಕುಮ್ಮಕ್ಕು ನೀಡುತ್ತಿರುವ ಕೆಲಸಗಳಿಂದಾಗಿ ಕುಖ್ಯಾತಿ ಪಡೆಯುವಂತಾಗಿರೋದು ದುರಂತ.