ಕಲಬುರಗಿಯ ಕೆಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಭರ್ಜರಿ ಸಕ್ಸಸ್‌

| N/A | Published : Apr 17 2025, 12:07 AM IST / Updated: Apr 17 2025, 10:13 AM IST

ಕಲಬುರಗಿಯ ಕೆಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಭರ್ಜರಿ ಸಕ್ಸಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಕೆಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿ ಬುಧವಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವ ಸಮೃದ್ಧಿ ಉದ್ಯೋಗ ಮೇಳ’ ಭರ್ಜರಿ ಸಕ್ಸಸ್‌ ಕಂಡಿದೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ : ಕಲಬುರಗಿಯ ಕೆಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿ ಬುಧವಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವ ಸಮೃದ್ಧಿ ಉದ್ಯೋಗ ಮೇಳ’ ಭರ್ಜರಿ ಸಕ್ಸಸ್‌ ಕಂಡಿದೆ.

ಬರೋಬ್ಬರಿ 10,147 ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲೇ 1,235 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಇದಲ್ಲದೆ ಮೇಳದಲ್ಲಿ ಪಾಲ್ಗೊಂಡವರ ಪೈಕಿ ವಿದ್ಯಾರ್ಹತೆ ಆಧಾರದಲ್ಲಿ 4,448 ಅಭ್ಯರ್ಥಿಗಳ ಹೆಸರನ್ನು ಉದ್ಯೋಗಕ್ಕಾಗಿ ಅಂತಿಮಗೊಳಿಸಲಾಗಿದೆ. ಆನ್‌ಲೈನ್‌ ಮೂಲಕ 29,090 ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಉದ್ಯೋಗ ಮೇಳದಲ್ಲಿ ಉದ್ಯೋಗದಾತ 248 ಕಂಪನಿಗಳು ಪಾಲ್ಗೊಂಡು ಸಂದರ್ಶನ ನಡೆಸಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿವೆ. ಸಂದರ್ಶನಕ್ಕಾಗಿ ಕಾಲೇಜಿನ 70 ಕೋಣೆಗಳನ್ನು ಮೀಸಲಿಡಲಾಗಿತ್ತು.

ಏತನ್ಮಧ್ಯೆ, ಮೇಳದ ಉದ್ಘಾಟನೆ ಸಮಾರಂಭದಲ್ಲೇ ಬೆಳಗಿನ ಸಂದರ್ಶನವನ್ನು ಯಶಸ್ವಿಯಾಗಿ ಮುಗಿಸಿ, ನೇಮಕಾತಿ ಪತ್ರ ಪಡೆದ ಭಾಗ್ಯಶ್ರೀ, ನಚಿಕೇತ್‌, ರೇಣುಕಾ, ಚಂದ್ರಶೇಖರ್‌, ಚೇತನ್‌, ಮಲ್ಲಿಕಾರ್ಜುನ, ಸೈಯ್ಯದ್‌ ನವಾಜ್‌, ರಶೀದ್‌, ಮೊಹ್ಮದ್‌ ಸೇರಿದಂತೆ ಹತ್ತು ಜನರಿಗೆ ಸಿಎಂ, ಡಿಸಿಎಂ ವೇದಿಕೆಯಲ್ಲೇ ಸಾಂಕೇತಿಕವಾಗಿ ನೇಮಕಾತಿ ಪತ್ರ ನೀಡಿದರು. ಇ‍ವರೆಲ್ಲರೂ ವಿವಿಧ ಕಂಪನಿಗಳಲ್ಲಿ ತಿಂಗಳಿಗೆ 40 ಸಾವಿರದಿಂದ 1 ಲಕ್ಷ ರು. ವರೆಗಿನ ಸಂಬಳದ ನೇಮಕಾತಿ ಪತ್ರ ಪಡೆದಿದ್ದು ವಿಶೇಷವಾಗಿತ್ತು. ಈ ಮಧ್ಯೆ, ವಿಯೆಟ್ನಾಂನಲ್ಲಿಯೂ ಕೆಲಸಕ್ಕಾಗಿ ನೂರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಉದ್ಯೋಗಾಕಾಂಕ್ಷಿಗಳು ಬೆಳಗ್ಗೆ 8 ಗಂಟೆಯಿಂದಲೇ ಕ್ಯಾಂಪಸ್‌ಗೆ ಬರಲಾರಂಭಿಸಿದ್ದರು. ಆಯೋಜಕರು ಆನ್‌ಲೈನ್‌ ಜೊತೆಗೆ, ಸ್ಥಳದಲ್ಲೂ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಿದ್ದರು. ಜಿಲ್ಲಾಡಳಿತ, ಕೆಕೆಆರ್‌ಟಿಸಿ ಸಹಯೋಗದಲ್ಲಿ ಉದ್ಯೋಗಾಕಾಂಕ್ಷಿಗಳು ಕೆಸಿಟಿ ಕಾಲೇಜು ಮೈದಾನಕ್ಕೆ ಬರಲು ಅನುಕೂಲವಾಗುವಂತೆ ಸಾರಿಗೆ ಬಸ್‌ ವ್ಯವಸ್ಥೆ ಮಾಡಿತ್ತು. ನೀರು, ನೆರಳಿನ ಸವಲತ್ತು ಕಲ್ಪಿಸಿತ್ತು. ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದಲೇ ಅಧಿಕ ಆಕಾಂಕ್ಷಿಗಳು ಆಗಮಿಸಿದ್ದರು.