ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಕಲಬುರಗಿ 3ನೇ ಸ್ಥಾನ

| Published : Feb 23 2024, 01:49 AM IST

ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಕಲಬುರಗಿ 3ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾಯಿಲೆಗೆ ತುತ್ತಾದ ಮಕ್ಕಳನ್ನು ಬಳಲಿಕೆ ಬಿಡದೆ ಅವರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವುದೇ ಆರೋಗ್ಯ ಇಲಾಖೆಯ ಗುರಿಯಾಗಿದೆ. ಇದರ ಯಶಸ್ವಿ ಭಾಗವಾಗಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ 3ನೇ ಸ್ಥಾನದಲ್ಲಿದೆ.

ಕನ್ನಡಪ್ರಭ ವಾರ್ತೆ ಆಳಂದ

ಯಾವುದೇ ಕಾಯಿಲೆಗೆ ತುತ್ತಾದ ಮಕ್ಕಳನ್ನು ಬಳಲಿಕೆ ಬಿಡದೆ ಅವರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವುದೇ ಆರೋಗ್ಯ ಇಲಾಖೆಯ ಗುರಿಯಾಗಿದೆ. ಇದರ ಯಶಸ್ವಿ ಭಾಗವಾಗಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ 3ನೇ ಸ್ಥಾನದಲ್ಲಿದೆ. ಶೀಘ್ರವೇ ಮೊದಲ ಸ್ಥಾನ ಪಡೆಯಲಿದೆ ಎಂದು ಜಿಲ್ಲಾ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ನೋಡಲ್ ಮತ್ತು ಆರ್‌ಸಿಎಚ್‌ ಅಧಿಕಾರಿ ಡಾ. ಶರಣಬಸಪ್ಪ ಕೇತ್ನಾಳ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಶಿಸು ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ನಡೆದ ಮಕ್ಕಳ ತಪಾಸಣೆ ಮತ್ತು ಚಿಕಿತ್ಸಾ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಳಂದ ತಾಲೂಕಿನಲ್ಲಿ ಆರ್‍ಬಿಕೆಸ್‍ಕೆ ಜಿಲ್ಲೆಯಲ್ಲೇ 300ಕ್ಕೂ ಅತಿ ಹೆಚ್ಚು ಮಕ್ಕಳನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಈ ಶಿಬಿರದ ಮೂಲಕ ಎಲ್ಲ ಕಾಯಿಲೆಯ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ತಪಾಸಣೆ ಮತ್ತು ಚಿಕಿತ್ಸೆಗೊಳಪಡಿಸಿ ಕಾಯಿಲೆ ಮುಕ್ತ ಮಕ್ಕಳನ್ನಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ಚಿಕಿತ್ಸೆ ಮತ್ತು ತಪಾಸಣೆಗೊಳಪಡಿಸಿ ನಿತಂತರವಾಗಿ ನಡೆಯುವ ಶಿಬಿರ ಮತ್ತು ಈ ಕಾರ್ಯದ ಸದ್ಬಳಕೆ ಮಾಡಿಕೊಳ್ಳಿ ಎಂದರು.

50 ಸಾವಿರ ವಿದ್ಯಾರ್ಥಿಗಳ ತಪಾಸಣೆ: ಕಳೆದ ತಿಂಗಳ ಕಾಲೇಜು ಮಟ್ಟದಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ಕೈಗೊಂಡ ರಕ್ತ ಹೀನತೆ ಪರೀಕ್ಷೆಯಲ್ಲಿ 5 ಸಾವಿರ ಮಕ್ಕಳು ತೀವ್ರತರ ರಕ್ತ ಹೀನತೆ ಕಂಡುಬಂದಿದ್ದು ಇವರೆಯಲ್ಲರಿಗೂ ಕಬ್ಬಿಣಾಂಶಯುಳ್ಳ ಚುಚ್ಚುಮದ್ದು ಮತ್ತು ಮಾತ್ರೆಗಳನ್ನು ನೀಡಿ ಸಮತೋಲನೆ ಕಾಪಾಡಲಾಗಿದೆ. ಆರ್‍ಬಿಎಸ್‍ಕೆ ಅಡಿಯಲ್ಲಿ ರಾಜ್ಯದಿಂದ ಒಡಬಂಡಿಕೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಅಪೌಷ್ಟಿಕ ಮತ್ತು ತೂಕ ಕಡಿಮೆ ಮಕ್ಕಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆಯಂತ ಕಾರ್ಯಾಚರಣೆಗೆ ಪೂರಕವಾಗಿ ಹೆಚ್ಚಿನ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಅಡಿಯಲ್ಲಿ ಕ್ಯಾಂಪ್ ಅಥವಾ ಸರಣಿ ಶಿಬಿರವು ಕಳೆದ 10 ವರ್ಷಗಳಿಂದ ನಡೆದರು ಸಹ ಈ ಭಾರಿ ರಾಜ್ಯಕ್ಕೆ ಕಲಬುರಗಿ ಮಾದರಿಯಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಹಾಗೂ ಗಂಭೀರವಾದ ಬೆನ್ನು ನೋವು, ಹೃದಯ ಕಾಯಿಲೆ, ಕಿವಿ ಮೂಗು ಕಣ್ಣು ಹೀಗೆ ಹಲವು ಕಾಯಿಲೆಗೆ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ ಎಂದರು.

ವಿವಿಧೆಡೆ ಶಿಬಿರ: ಜಿಲ್ಲೆಯ ಸೇಡಂನಲ್ಲಿ 275 ಮಕ್ಕಳು, ಜೇವರ್ಗಿಯಲ್ಲಿ 205 ವಿವಿಧ ಕಾಯಿಲೆ ಮಕ್ಕಳನ್ನು ಮತ್ತು ಚಿತಾಪೂರದಲ್ಲಿ ನಡೆದ 90 ಮಕ್ಕಳ ಹೃದಯ ತಪಾಸಣೆ ಕೈಗೊಂಡಾಗ ಇದರಲ್ಲಿ 41 ಮಕ್ಕಳನ್ನು ಶಸ್ತ್ರಚಿಕಿತ್ಸೆ ಆಯ್ಕೆಮಾಡಿ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲದೆ, ಚಿಂಚೋಳಿಯಲ್ಲಿ ಫೆ.23ರಂದು, ಅಫಜಲ್ಪುರದಲ್ಲಿ 27ರಂದು ಹಾಗೂ ಕಲಬುರಗಿಯಲ್ಲಿ ಮಾ.21ಕ್ಕೆ ಶಿಬಿರದ ಮೂಲಕ ತಪಾಸಣೆ ಚಿಕಿತ್ಸೆ ಮತ್ತು ಔಷದೋಪಚಾರ ಮಾಡಲಾಗುವುದು. ಕಲಬುರಗಿಯಲ್ಲಿ ಕಳೆದ ಜ.22ರಂದು ಮಕ್ಕಳ ಬೆನ್ನು ಮೂಳೆ ಕಾಯಿಲೆಯಿಂದ ಬಳಲುತ್ತಿದ್ದ 21 ಮಕ್ಕಳನ್ನು ಆಯ್ಕೆಮಾಡಿ ಉಚಿತವಾಗಿ ದೊಡ್ಡ ಆಸ್ಪತ್ರೆಗಳಿಗೆ ಶಸ್ತ್ರ ಚಿಕಿತ್ಸೆ ಕಳುಹಿಸಲಾಗಿದೆ ಎಂದು ಶರಣಬಸಪ್ಪ ಕೇತ್ನಾಳ ಅವರು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಶುಶಿಲಕುಮಾರ ಅಂಬುರೆ ಮಾತನಾಡಿ, ಆರ್‍ಬಿಎಸ್‍ಕೆ ಮತ್ತು ಆರ್‍ಕೆಎಸ್‍ಕೆ ಅಡಿಯಲ್ಲಿ ನಿಂತರ ತಪಾಸಣೆ ಮತ್ತು ಚಿಕಿತ್ಸೆಯ ತಮ್ಮ ಮಕ್ಕಳಿಗೆ ಕೊಡಿಸುವ ಮೂಲಕ ಪಾಲಕರು ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿಡಿಪಿಒ ಶ್ರೀಕಾಂತ ಮೇಂಗಜಿ, ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ, ಡಾ. ಉಮಾಕಾಂತ, ಯೋಗೇಶ ಖಾನಗೆ, ಆರ್‍ಬಿಎಸ್‍ಕೆ ತಂಡದ ವೈದ್ಯ ಡಾ. ವಿನಾಯಕ ತಾಟಿ, ಡಾ. ಸುಶಾಂತ ಸಂಗಾ, ಡಾ. ಸಂಘರ್ಷ ವಾಲಿ, ಅಶ್ವಿನಿ ಕೋಟೆ, ಆರತಿ ಪರಗೆ, ರೇಹಾನ್, ವ್ಯವಸ್ಥಾಪಕ ಕೃಷ್ಣಾ, ಡಾ. ತಾಫಿಕ್, ಚಂದ್ರಕಾಂತ ದೇವಿಂದ್ರ, ಡಾ. ಸುನಿಲ, ಮೇಲ್ವಿಚಾರಕರು ಇದ್ದರು.

214 ಮಕ್ಕಳ ತಪಾಸಣೆ ಚಿಕಿತ್ಸೆ: ಶಿಬಿರದಲ್ಲಿ ಭಾಗವಹಿಸಿದ್ದ ತಾಲೂಕಿನ ಶಾಲೆ ಮತ್ತು ಅಂಗನವಾಡಿ 214 ಮಕ್ಕಳಲ್ಲಿ ಶ್ರವಣದೋಷ ಹಾಗೂ ಮೂಖಯುಳ್ಳ 43, ಹೃದಯ ಕಾಯಿಲೆ 12, ಅಪೌಷ್ಟಿಕ 12 ಮಕ್ಕಳು ಸೇರಿ ಸೀಳು ತುಟ್ಟಿ, ಬುದ್ದಿ ಮಾಂದ್ಯ, ನೇತ್ರದೋಷ ಮಕ್ಕಳನ್ನು ವಿವಿಧ ಕಾಯಿಲೆಗಳಿಗೆ ವೈದ್ಯರ ತಂಡವು ತಪಾಸಣೆ ನಡೆಸಿ ಚಿಕಿತ್ಸೆ ನಡೆಸಲಾಯಿತು. ಹೃದಯರೋಗ ಮತ್ತು ಸೀಳು ತುಟಿಯುಳ್ಳ 6 ಮಕ್ಕಳನ್ನು ಶಸ್ತ್ರಿಚಿಕಿತ್ಸೆಗೆ ಆಯ್ಕೆಮಾಡಿ ಕಲಬುರಗಿ ಜೀಮ್ಸ್ ಆಸ್ಪತ್ರೆಗೆ ಸೀಫಾರಸು ಮಾಡಲಾಯಿತು. ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಪೊಟ್ಟಣ ಔಷದೋಷಚಾರ ನೀಡಲಾಯಿತು.