ಕಲಬುರಗಿ: ಎಸ್‌ಬಿಐ ಎಟಿಎಂ ದರೋಡೆ, ₹18 ಲಕ್ಷ ಕಳ್ಳತನ

| Published : Apr 10 2025, 01:03 AM IST

ಸಾರಾಂಶ

ಗ್ಯಾಸ್‌ ಕಟರ್‌ ಬಳಸಿ ಕಳ್ಳರು ಕಲಬುರಗಿಯ ಎಟಿಎಂನಲ್ಲಿ ₹18 ಲಕ್ಷ ಹಣವನ್ನು ದೋಚಿ ಪರಾರಿ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪಕ್ಕದ ಬೀದರ್, ಮಂಗಳೂರು ಬ್ಯಾಂಕ್‌ಗಳಲ್ಲಿ ಹಣ ದರೋಡೆ ಪ್ರಕರಣಗಳ ನೆನಪು ಮಾಸುವ ಮುನ್ನವೇ ಕಲಬುರಗಿಯಲ್ಲಿ ಎಸ್‌ಬಿಐನ ಎಟಿಎಂಗೆ ದುಷ್ಕರ್ಮಿಗಳು ಕನ್ನ ಹಾಕಿದ ಘಟನೆ ನಡೆದಿದೆ.

ನಾಲ್ವರು ದರೋಡೆಕೋರರಿದ್ದ ತಂಡ ಮಂಗಳವಾರ ತಡರಾತ್ರಿ ರಿಂಗ್‌ ರಸ್ತೆಯಲ್ಲಿರುವ ಪೂಜಾರಿ ಚೌಕ್ ಹತ್ತಿರದ ಎಂಟಿಎಂ ಹೊಕ್ಕು, ಗ್ಯಾಸ್ ಕಟರ್ ಬಳಸಿ, ಲಾಕರ್‌ ಕಟ್‌ ಮಾಡಿ 18 ಲಕ್ಷ ರು. ನಗದನ್ನು ಕದ್ದೊಯ್ದಿದ್ದಾರೆ. ಗುರುತು ಸಿಗಬಾರದು ಎಂದು ಕಿರಾತಕರು ಮೊದಲಿಗೆ ಸಿಸಿ ಕ್ಯಾಮರಾಗೆ ಬ್ಲ್ಯಾಕ್‌ ಸ್ಪ್ರೇ ಮಾಡಿದ್ದಾರೆ. ಉತ್ತರ ಭಾರತದ ವೃತ್ತಿಪರ ದರೋಡೆಕೋರರು ಈ ಕೃತ್ಯ ಎಸಗಿರುವ ಶಂಕೆ ಮೂಡಿದೆ.

ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಎಟಿಎಂ ಒಳಗೆ ನುಸುಳುವುದಕ್ಕೂ ಮೊದಲು ಖದೀಮರು ಬಡಾವಣೆಯಲ್ಲಿರುವ ಎಲ್ಲ ಕ್ಯಾಮರಾಗಳಿಗೆ ಬ್ಲ್ಯಾಕ್ ಕಲರ್ ಸ್ಪ್ರೇ ಮಾಡಿ ತಮ್ಮ ಚಲನವಲನ ಅಲ್ಲಿ ಸೆರೆಯಾಗದಂತೆ ಸಂಚು ಮಾಡಿದ್ದಾರೆ. ಬಳಿಕ, ಸೆಕ್ಯುರಿಟಿ ಗಾರ್ಡ್‌ ಇಲ್ಲದ್ದನ್ನು ಗಮನಿಸಿ, ಇಲ್ಲಿನ ಎಟಿಎಂಗೆ ನುಗ್ಗಿ ನಗದು ಕದ್ದು ಪರಾರಿಯಾಗಿದ್ದಾರೆ.

ಇದಾದ ನಂತರ ಪಕ್ಕದ ಮತ್ತೊಂದು ಎಟಿಎಂಗೂ ಕನ್ನ ಹಾಕಲು ಯತ್ನಿಸುವಾಗ ಎಟಿಎಂ ಒಳಗೆ ಅಳವಡಿಸಿರುವ ಸೈರನ್ ಬೆಲ್ ಹೊಡೆದಿದೆ. ಹೀಗಾಗಿ, ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದರೋಡೆಗೆ ಒಳಗಾಗಿರುವ ಎಟಿಎಂನ ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಖದೀಮರು ಬಿಳಿ ಬಣ್ಣದ ಐ20 ಕಾರಿನಲ್ಲಿ ಪರಾರಿಯಾಗಿರುವ ದೃಶ್ಯಗಳು ಸೆರೆಯಾಗಿವೆ.

ಈ ಮಧ್ಯೆ, ಮಂಗಳವಾರ ಸದರಿ ಎಟಿಎಂಗೆ ಸಂಬಂಧಿತ ಏಜೆನ್ಸಿಯವರು ಹಣ ಹಾಕುವ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಜನವರಿಯಲ್ಲಿ ಪಕ್ಕದ ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿಯನ್ನು ಹತ್ಯೆ ಮಾಡಿ, 1 ಕೋಟಿ ರೂ.ದೋಚಿಕೊಂಡು ಹೋಗಲಾಗಿತ್ತು. ಈ ದರೋಡೆಕೋರರು ಇದುವರೆಗೂ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಕಲಬುರಗಿಯಲ್ಲೂ ಎಟಿಎಂ ಕಳ್ಳತನವಾಗಿದೆ. ಎಟಿಎಂ ಹಾಗೂ ಬ್ಯಾಂಕ್​​ಗಳನ್ನೇ ಟಾರ್ಗೆಟ್​​ ಮಾಡಿ ಈ ಕೃತ್ಯ ಎಸಗುತ್ತಿರುವುದನ್ನು ನೋಡಿದರೆ ಇದು ಒಂದೇ ಗ್ಯಾಂಗ್‌ನ ಕೃತ್ಯ ಇರಬಹುದು, ಉತ್ತರ ಭಾರತದ ಗ್ಯಾಂಗ್​ ಮೇಲೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ. ಘಟನೆ ಕುರಿತು ತನಿಖೆ ಆರಂಭವಾಗಿದ್ದು, ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.