ಅಕ್ಟೋಬರ್‌ 23 ರಂದು ಮತದಾನ ನಡೆಯಲಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಖಾಡದಲ್ಲಿ ಬಿಜೆಪಿ- ಜೆಡಿಎಸ್‌ ದೋಸ್ತಿ ಪಕ್ಷದ ಹುರಿಯಾಳು, ಪುನರಾಯ್ಕೆ ಬಯಸಿರುವ ಹಾಲಿ ಎಂಎಲ್‌ಸಿ ಶಶಿಲ್‌ ನಮೋಶಿ ಹಾಗೂ ಶಿಕ್ಷಕರ ಆಶೀರ್ವಾದ ಬಯಸಿ ತಮ್ಮ ಅದೃಷ್ಟ ಪಣಕ್ಕಿಟ್ಟಿರುವ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್‌ ಅವರು ಸೋಮವಾರ ಏಕಕಾಲಕ್ಕೆ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣೆಯ ಕಣ ರಂಗೇರಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಅಕ್ಟೋಬರ್‌ 23 ರಂದು ಮತದಾನ ನಡೆಯಲಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಖಾಡದಲ್ಲಿ ಬಿಜೆಪಿ- ಜೆಡಿಎಸ್‌ ದೋಸ್ತಿ ಪಕ್ಷದ ಹುರಿಯಾಳು, ಪುನರಾಯ್ಕೆ ಬಯಸಿರುವ ಹಾಲಿ ಎಂಎಲ್‌ಸಿ ಶಶಿಲ್‌ ನಮೋಶಿ ಹಾಗೂ ಶಿಕ್ಷಕರ ಆಶೀರ್ವಾದ ಬಯಸಿ ತಮ್ಮ ಅದೃಷ್ಟ ಪಣಕ್ಕಿಟ್ಟಿರುವ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್‌ ಅವರು ಸೋಮವಾರ ಏಕಕಾಲಕ್ಕೆ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣೆಯ ಕಣ ರಂಗೇರಿದೆ.ರಾಜ್ಯದಲ್ಲಿ ಜೆಡಿಎಸ್‌ ಜತೆ ಮೈತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಈ ಹಣಾಹಣಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಮಾತಿಗೆ ಕನ್ನಡಿ ಎಂಬಂತೆ ಮಾಜಿ ಸಿಎಂ ಯಡಿಯೂರಪ್ಪ, ಜೆಡಿಎಸ್‌ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶಂಪೂರ್‌ ಸೇರಿದಂತೆ ದೋಸ್ತಿ ಪಕ್ಷದ ಅನೇಕ ಮುಖಂಡರು ಇಂದಿನ ನಮೋಶಿ ನಾಮಪತ್ರ ಸಲ್ಲಿಕೆಯ ಯಲ್ಲಿ ಗಮನ ಸೆಳೆದರು.ಇತ್ತ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವುದರಿಂದ ಶಿಕ್ಷಕರ ಕ್ಷೇತ್ರ ಕೈವಶಕ್ಕೆ ರಣತಂತ್ರ ರೂಪಿಸಿದ್ದು ಅದರ ಭಾಗವಾಗಿ ಇಂದಿನ ಶರಣಪ್ಪ ಮಟ್ಟೂರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌, ಸಂಸದ ಕಾಧಾತೃಷ್ಣ ದೊಡ್ಮನಿ ಜತೆಗಿದ್ದು ಗಮನ ಸೆಳೆದರು.ಎನ್‌ಡಿಎ ಅಭ್ಯರ್ಥಿಯಾಗಿ ನಮೋಶಿ ನಾಮಪತ್ರ: ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಬಿಜೆಪಿ- ಜೆಡಿಎಸ್ ಒಕ್ಕೂಟದ (ಎನ್.ಡಿ.ಎ) ಅಭ್ಯರ್ಥಿಯಾಗಿ ಶಶೀಲ್ ನಮೋಶಿ ಸೋಮವಾರ ನಾಮಪತ್ರ ಸಲ್ಲಿಸಿದರು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ಅವರಿಗೆ ಶಶೀಲ್ ನಮೋಶಿ ನಾಮಪತ್ರ ಸಲ್ಲಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಮಾಜಿ ಸಂಸದ ಉಮೇಶ ಜಾಧವ್, ಎನ್‌ ರವಿಕುಮಾರ್‌, ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ ನಾಮಪತ್ರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರ ನಾಮಪತ್ರ ಸಲ್ಲಿಸಿದರು. ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಖನಿಜ್ ಫಾತಿಮಾ ಇದ್ದರು. ರ್ಯಾಲಿಯಲ್ಲಿ ಎಂಎಲ್ಸಿ ತಿಪ್ಪಣ್ಣ ಕಮಕನೂರ್‌, ಜಗದೇವ ಗುತ್ತೇದಾರ್‌, ಕಾಂಗ್ರೆಸ್‌ ಅಧ್ಯಕ್ಷ ಡಾ. ಕಿರಣ ದೇಶಮುಖ ಸೇರಿದಂತೆ ಅನೇಕರಿದ್ದರು.ಕಾಂಗ್ರೆಸ್‌ನಿಂದ ಶಿಕ್ಷಕರ ಕಲ್ಯಾಣ ಶೂನ್ಯ: ನಮೋಶಿ: ಬಿಜೆಪಿ ಪಕ್ಷ ಸದಾಕಾಲ ಶಿಕ್ಷಕರು, ಶಿಕ್ಷಣ ರಂಗವನ್ನು ಬೆಂಬಲಿಸಿದೆ, ಆದರೆ ಕಾಂಗ್ರೆಸ್‌ ಪಕ್ಷ ಶೈಕ್ಷಣಿಕ ವರ್ಷದಲ್ಲಿ ಗೊಂದಲಗಳನ್ನು ಮಾಡುತ್ತ ಅನೇಕ ಹೊಸ ಆದೇಶಗಳನ್ನು ತಂದು ಶಿಕ್ಷಕರ ನೆಮ್ಮದಿ ಕೆಡಿಸುತ್ತಿದೆ ಎಂದು ದೋಸ್ತಿ ಅಭ್ಯರ್ಥಿ ಶಶಿಲ್‌ ನಮೋಶಿ ದೂರಿದರು. ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಸಾಕಷ್ಟು ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಿಲ್ಲ, ಹಣಕಾಸು ಇಲಾಖೆ ಒಪ್ಪಿಗೆ ಇಲ್ಲದೆ ಹುದ್ದೆ ಭರ್ತಿಗೆ ಕಲಂ 371 ಜೆ) ನಲ್ಲಿ ಅವಕಾಶವಿದ್ದರೂ ಆ ಕೆಲಸ ಮಾಡುತ್ತಿಲ್ಲ. ಹಳೇ ಪಂಚಮಿ ಪದ್ಧತಿಗೆ ಮರಳುವುದಾಗಿ ಕಾಂಗ್ರೆಸ್‌ ತನ್ನ ಭರವಸೆ ಈಡೇರಿಸಿಲ್ಲ. ಎಸ್ಸೆಸೆಲ್ಸಿ, ಪಿಯುಸಿ ಶಿಕ್ಷಣ, ಶಿಕ್ಷಕರು, ಪರೀಕ್ಷೆ ಸಂಬಂಧಪಟ್ಟಂತೆ ಗೊಂದಲಕಾರಿ ಆದೇಶ ಹೊರತರುತ್ತಿದೆ. ಇವನ್ನೆಲ್ಲ ಕಂಡು ಶಿಕ್ಷಕರು ರೋಸಿ ಹೋಗಿದ್ದಾರೆ. ಬಿಜೆಪಿಗೆ ಶಿಕ್ಷಕರು ಈ ಬಾರಿಯೂ ಬೆಂಬಲಿಸುತ್ತಾರೆಂದು ನಮೋಶಿ ವಿಶ್ವಾಸ ವ್ಯಕ್ತಪಡಿಸಿದರು.ಹಳೇ ಪಿಂಚಣಿ ಯೋಜನೆ ಜಾರಿ: ಶರಣಪ್ಪ ಮಟ್ಟೂರ್‌: ಕಾಂಗ್ರೆಸ್ ಪಕ್ಷ ಶಿಕ್ಷಕರ ವಿಷಯದಲ್ಲಿ ನುಡಿದಂತೆ ನಡೆದಿದೆ. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದೇವೆ. ನಮ್ಮ ಪಕ್ಷ ಇದಕ್ಕೆ ಬದ್ಧವಾಗಿದೆ ಎಂದು ಶಿಕ್ಷಕ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ್‌ ಹೇಳಿದರು. ನಾಮಪತ್ರ ಸಲ್ಲಿಕೆ ನಂತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಭಾಗದಲ್ಲಿನ ಖಾಲಿ ಹುದ್ದೆ ಭರ್ತಿಗೂ ಪಕ್ಷ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ಕೆಲಸಗಳು ಸಾಗಿವೆ. ಹಿಂದಿ ವಿಷಯ ಶಿಕ್ಷಕರು ಗಾಬರಿ ಪಡಬೇಕಿಲ್ಲ. ಅತಿಥಿ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಲು ಕೆಸಿಎಸ್‌ಆರ್‌ಗೆ ತಿದ್ದುಪಡಿ ತರುವ ಯತ್ನ ಸಾಗಿದೆ. ಶಿಕ್ಷಕರ ಪರ ಕಾಂಗ್ರೆಸ್‌ ಸದಾ ಇರಲಿದೆ. ನಮ್ಮದೆ ಸರ್ಕಾರ ಇರುದರಿಂದ ಶಿಕ್ಷಕರ ಆಶೀರ್ವಾದ ನಮಗೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.