ಸಾರಾಂಶ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಯಾಗುವುದು ಅನುಮಾನ. ಹೀಗಾಗಿ ಅವರ ಅಳಿಯ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕರು ಚರ್ಚಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಬುರಗಿ ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣ್ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸದಿದ್ದರೆ ಅವರ ಅಳಿಯ ರಾಧಾಕೃಷ್ಣ ಅವರ ಸ್ಪರ್ಧೆಗೆ ಅಭ್ಯಂತರವಿಲ್ಲ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ ಒಟ್ಟಾರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಚರ್ಚೆ ವೇಳೆ ಮೊದಲಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಮನವಿ ಮಾಡಲು ಚರ್ಚಿಸಲಾಯಿತು. ಆದರೂ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಯಾಗುವುದು ಅನುಮಾನ. ಹೀಗಾಗಿ ಅವರ ಅಳಿಯ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಆ ಭಾಗದ ಶಾಸಕರು ಹಾಗೂ ಪರಿಷತ್ ಸದಸ್ಯರು ರಾಧಾಕೃಷ್ಣ ಅವರು ಸ್ಪರ್ಧೆಗೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.ಅಂತಿಮವಾಗಿ ಪ್ರಿಯಾಂಕ್ ಖರ್ಗೆ ಹಾಗೂ ಶರಣ್ ಪ್ರಕಾಶ್ ಪಾಟೀಲ್ ಅವರು, ಸಭೆಯ ಅಭಿಪ್ರಾಯವನ್ನು ಕೆಪಿಸಿಸಿ ಮೂಲಕ ಹೈಕಮಾಂಡ್‌ಗೆ ಕಳಿಸೋಣ. ಜತೆಗೆ ಹೈಕಮಾಂಡ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರ ಪರ ಕೆಲಸ ಮಾಡುವುದಾಗಿ ಅಭಿಪ್ರಾಯಣ ನೀಡೋಣ ಎಂದು ಹೇಳಿದ್ದಕ್ಕೆ ಸಭೆಯಲ್ಲಿ ಎಲ್ಲರೂ ಸಮ್ಮತಿಸಿದರು ಎಂದು ತಿಳಿದುಬಂದಿದೆ.
ಸಭೆಯಲ್ಲಿ ಶಾಸಕರಾದ ಖನಿಜ್ ಫಾತಿಮಾ, ಅಲ್ಲಮ ಪ್ರಭು ಪಾಟೀಲ್, ಡಾ.ಅಜಯ್ ಸಿಂಗ್, ಎಂ.ವೈ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ಹಲವರು ಭಾಗಿಯಾಗಿದ್ದರು.