ಕಲಬುರಗಿ: ವಚನಗಳ ಅನುವಾದ ಕಾರ್ಯಾಗಾರ

| Published : Feb 07 2024, 01:50 AM IST

ಸಾರಾಂಶ

ವಚನಗಳನ್ನು ಇತರ ಜಾಗತಿಕ ಭಾಷೆಗಳಿಗೆ ಅನುವಾದಿಸುವ ಮೂಲಕ ನಾವು ಭಾರತೀಯ ಮೌಲ್ಯಗಳು ಮತ್ತು ತತ್ವಶಾಸ್ತ್ರವನ್ನು ಜಗತ್ತಿಗೆ ತಲುಪಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ಪ್ರಸ್ತುತ ಸಂಕೀರ್ಣ ವಿಶ್ವದಲ್ಲಿ ವಚನಗಳ ಮಾನವೀಯ ಮೌಲ್ಯಗಳು ಅತ್ಯಗತ್ಯವಾಗಿವೆ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ತಾಲೂಕಿನ ಕಡಗಂಚಿ ಬಳಿಯ ಸಿಯುಕೆ, ಬಸವ ಸಮಿತಿ ಮತ್ತು ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಆಯೋಜಿಸಿದ್ದ ವಚನಗಳನ್ನು ಜಪಾನೀಸ್, ಜರ್ಮನ್ ಮತ್ತು ಸ್ಪ್ಯಾನಿಶ್‌ ಭಾಷೆಗಳಿಗೆ ಭಾಷಾಂತರಿಸುವ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಪೀಳಿಗೆಗೆ ಮಾನವೀಯ ಮೌಲ್ಯಗಳ ಶಿಕ್ಷಣ ಮತ್ತು ತರಬೇತಿ ನೀಡಬೇಕಾದ ಅವಶ್ಯಕತೆಯಿದೆ. ಆದ್ದರಿಂದ ನಾವು ನಮ್ಮ ವಿಶ್ವವಿದ್ಯಾಲಯದಲ್ಲಿ ಯುಜಿ ಮತ್ತು ಪಿಜಿ ಪಠ್ಯಕ್ರಮದಲ್ಲಿ ವಚನಗಳನ್ನು ಪರಿಚಯಿಸಿದ್ದೇವೆ. ವಚನಗಳನ್ನು ಇತರ ಜಾಗತಿಕ ಭಾಷೆಗಳಿಗೆ ಅನುವಾದಿಸುವ ಮೂಲಕ ನಾವು ಭಾರತೀಯ ಮೌಲ್ಯಗಳು ಮತ್ತು ತತ್ವಶಾಸ್ತ್ರವನ್ನು ಜಗತ್ತಿಗೆ ತಲುಪಿಸಬಹುದಾಗಿದೆ ಎಂದು ಹೇಳಿದರು.

ಡಾ.ಅರವಿಂದ ಜತ್ತಿ ಅಧ್ಯಕ್ಷರು ಬಸವ ಸಮಿತಿ, ಬೆಂಗಳೂರು ಮುಖ್ಯ ಅತಿಥಿಯಾಗಿದ್ದರು. ಅವರು ಮಾತನಾಡಿ, ಇಲ್ಲಿಯವರೆಗೆ ನಾವು 34 ಭಾರತೀಯ ಮತ್ತು ಜಾಗತಿಕ ಭಾಷೆಗಳಿಗೆ ವಚನಗಳನ್ನು ಅನುವಾದಿಸಿದ್ದೇವೆ. 2025 ರ ವೇಳೆಗೆ ನಾವು 50 ಭಾಷೆಗಳನ್ನು ತಲುಪಲು ಬಯಸುತ್ತೇವೆ. ಕನ್ನಡ, ಮರಾಠಿ, ತೆಲಗು ಮತ್ತು ತಮಿಳು ಆವೃತ್ತಿಗಳು ಹೆಚ್ಚು ಬೇಡಿಕೆಯಲ್ಲಿವೆ ಮತ್ತು ಅನೇಕ ಪರಿಷ್ಕೃತ ಆವೃತ್ತಿಗಳನ್ನು ಹೊರತಂದಿದ್ದೇವೆ ಎಂದು ಹೇಳಿದರು.

ಈ ವೇಳೆ ಪ್ರೊ. ವಿಕ್ರಂ ವಿಸಾಜಿ, ಡಾ. ಸುಧಾ ಶ್ರೀಧರ, ಡಾ. ಸಿದ್ದಣ್ಣ ಲಂಗೋಟಿ, ಡಾ.ಕಲ್ಯಾಣಮ್ಮ ಲಂಗೋಟಿ, ಡಾ.ಶಿವಂ ಮಿಶ್ರಾ, ಡಾ.ಪಿ.ಕುಮಾರಮಂಗಲಂ, ಡಾ.ಗಣಪತಿ ಬಿ.ಸಿನ್ನೂರ ಉಪಸ್ಥಿತರಿದ್ದರು.