ತೋಂಟದಾರ್ಯ ಮಠದ ಪುಸ್ತಕ ಪ್ರಕಟಣೆ ಕೆಲಸದ ಹಿಂದಿನ ಶಕ್ತಿಯಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ಸದಾಕಾಲ ಸ್ಮರಣೀಯರು.
ಗದಗ ತೋಂಟದಾರ್ಯ ಮಠದಲ್ಲಿ 2819ನೇ ಶಿವಾನುಭವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗದಗ
ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸೇವೆ ಅಪಾರವಾದದ್ದು ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2819ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನೇಕ ಶರಣರ ವಚನಗಳ ಸಂಶೋಧನೆ, ಸಂಪಾದನೆ, ಪ್ರಕಟಣೆಯಲ್ಲಿ ಮಾಡಿದ ಸೇವೆ ಅನುಪಮವಾದದ್ದು. ತೋಂಟದಾರ್ಯ ಮಠದ ಪುಸ್ತಕ ಪ್ರಕಟಣೆ ಕೆಲಸದ ಹಿಂದಿನ ಶಕ್ತಿಯಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ಸದಾಕಾಲ ಸ್ಮರಣೀಯರು ಎಂದು ಹೇಳಿದರು.
ಶ್ರೇಷ್ಠ ಶಿಕ್ಷಕ, ಸಂಶೋಧಕ, ಆಡಳಿತ ಅಧಿಕಾರಿಯಾಗಿದ್ದರು. ಅವರು ವೈಚಾರಿಕ ಹಿನ್ನೆಲೆಯ ಪ್ರತಿಪಾದಕರಾಗಿದ್ದರು. ಶ್ರಾವಣ ಮಾಸ ಲಿಂಗಾಯತ ಧರ್ಮದಲ್ಲಿ ಶ್ರೇಷ್ಠ ಮಾಸವಾಗಿದೆ. ಬಸವಾದಿ ಶರಣರ ಆದರ್ಶಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟಮದ ಆರು ವೈರಿಗಳು ಸಪ್ತ ವ್ಯಸನಗಳನ್ನು ತೊರೆಯಲು ಮಹಾತ್ಮರ ಶರಣರ ಆದರ್ಶ ಮತ್ತು ಸಂದೇಶಗಳನ್ನು ಕೇಳಿ ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು.ಉಪನ್ಯಾಸಕ ಡಾ. ಶರಣಬಸವ ವೆಂಕಟಾಪುರ ಮಾತನಾಡಿ, ಆಳವಾದ ಅಧ್ಯಯನ ಮಾಡುವುದು, ಹುಡುಕುವುದು, ಸಂಶೋಧನೆ ಮಾಡುವುದೇ ಅವರ ಧ್ಯೇಯವಾಗಿತ್ತು. ವಚನಶಾಸ್ತ್ರ ಸಂಶೋಧನೆ, ಸಂಪಾದನೆಯಲ್ಲಿ ಮಾಡಿದ ಕಾರ್ಯ ಅಪಾರವಾದದ್ದು. ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಬೆಳೆಯಬೇಕೆಂಬ ಅಪಾರ ಹಂಬಲ ಹೊಂದಿದ್ದರು. ಕರ್ನಾಟಕದಲ್ಲಿ ಹುಟ್ಟಿದ ಮೊಟ್ಟಮೊದಲ ಧರ್ಮ ಲಿಂಗಾಯತ ಧರ್ಮ ಸ್ವತಂತ್ರವಾಗಿ ಬೆಳೆಯಬೇಕೆಂಬ ಗುರಿ ಕಲಬುರ್ಗಿ ಅವರದಾಗಿತ್ತು ಎಂದರು.
ಈ ವೇಳೆ ನಾರಿ ಸಮ್ಮಾನ ಪುರಸ್ಕೃತೆ ಸುವರ್ಣ ಸದಾಶಿವಯ್ಯ ಮದರಿಮಠ ಅವರನ್ನು ಸನ್ಮಾನಿಸಲಾಯಿತು. ಗಿರಿಜಕ್ಕ ಧರ್ಮರಡ್ಡಿ ಅವರು, ಶರಣರು ಕಂಡ ಅನಾದಿ ಬಸವಣ್ಣ ಎನ್ನುವ ವಿಷಯ ಕುರಿತು ಪ್ರವಚನ ಮಾಡಿದರು. ದಾಸೋಹ ಸೇವೆಯನ್ನು ರೇವಣಸಿದ್ದಯ್ಯ ಮರಿದೇವರಮಠ ಮತ್ತು ಬಸವರಾಜ ಗಣಪ್ಪನವರ ವಹಿಸಿದ್ದರು. ಸೂರಜ ಮರಿಗೌಡರ ಧರ್ಮಗ್ರಂಥ ಪಠಣ, ಕೃತಿಕಾ ಮರಿಗೌಡ ವಚನ ಚಿಂತನ ನೆರವೇರಿಸಿದರು. ವಿಜಯ ಕಿರೇಸೂರ ನಿರ್ದೇಶನದ ಸ್ವಾತಂತ್ರ‍್ಯ ಸಂಗ್ರಾಮ ಕುರಿತಾದ ಕೈಗೊಂಬೆ ಆಟವನ್ನು ಕದಾಂಪುರ ಸರ್ಕಾರಿ ಹೈಸ್ಕೂಲಿನ ಮಕ್ಕಳು ಪ್ರದರ್ಶನ ಮಾಡಿದರು.ಈ ವೇಳೆ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇದ್ದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ಡಾ. ಉಮೇಶ ಪುರದ ಸ್ವಾಗತಿಸಿದರು.