ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.ಉದಗಟ್ಟಿ, ಶಾರದಾಳ, ಅಂಕಲಗಿ, ಕಲಾದಗಿ, ಗೊವಿಂದಕೊಪ್ಪ ಐದು ಗ್ರಾಮಗಳ ಒಳಗೊಂಡ ಕಲಾದಗಿ ಪಿಕೆಪಿಎಸ್‌ಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಂಕಲಗಿ ಗ್ರಾಮದ ಮಂಜುನಾಥ.ಕಿ.ಬಿಲಕೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉದಗಟ್ಟಿ ಗ್ರಾಮದ ರಾಜೇಶ್.ಹ.ಕಾಮಣ್ಣವರ್ ಇಬ್ಬರೇ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಇವರ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿ ಎಸ್.ಎ.ಸಿಂಧೂರಿ ತಿಳಿಸಿದರು.
ವಿಜಯೋತ್ಸವ:ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಂದು ಐದು ಗ್ರಾಮಗಳ ನೂರಾರು ರೈತರು ಪಕ್ಷದ ಕಾರ್ಯಕರ್ತರು, ನಿರ್ದೇಶಕರು ವಿನೂತನವಾಗಿ ಸಂಭ್ರಮಿಸಿದರು. ಆಯ್ಕೆ ವೇಳೆ ಆಗಮಿಸಿದ ಪ್ರತಿಯೊಬ್ಬ ರೈತನಿಗೂ ಹಸಿರು ಶಾಲು ಹಾಕಿ ಸಂಭ್ರಮಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಸಿಹಿ ತಿನಿಸಿ ಸಂಭ್ರಮಿಸಿದರು.
ಒಳ ಒಪ್ಪಂದ:ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲೂ ಪೆನಲ್ ಮಾಡಿಕೊಂಡು ಸಂಘಟಿತ ಪ್ರಯತ್ನದ ಫಲವಾಗಿ 11 ನಿರ್ದೇಶಕರು ಆಯ್ಕೆಯಾಗಿದ್ದರು. ಐದು ಗ್ರಾಮದ 11 ನಿರ್ದೇಶಕರು ತಮ್ಮ ಮಾರ್ಗದರ್ಶಕ ಹಿರಿಯ ಕಾರ್ಯಕರ್ತರ ಜೊತೆಗೂಡಿ ಒಳ ಒಪ್ಪಂದ ಮಾಡಿಕೊಂಡು ಮುಂದಿನ ಐದು ವರ್ಷ ನಾಲ್ಕು ಗ್ರಾಮಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಅಧಿಕಾರ ಹಂಚಿಕೆಯಾಗುವಂತೆ ಮಾತನಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಶಾರದಾಳ ಗ್ರಾಮಕ್ಕೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಇಲ್ಲದೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್) ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಹಕ್ಕಿರುವ ವೋಟಿಂಗ್ ಪವರ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.