ಇಕೆವೈಸಿಗೆ ಮುಗಿಬಿದ್ದ ಜನ!

| Published : Dec 27 2023, 01:32 AM IST / Updated: Dec 27 2023, 01:33 AM IST

ಸಾರಾಂಶ

ಗೃಹಬಳಕೆ ಸಿಲಿಂಡರ್‌ ಸಬ್ಸಿಡಿ ಖಾತೆಗೆ ಜಮೆ ಆಗಬೇಕಾದರೆ ಇಕೆವೈಸಿ ಮಾಡುವುದು ಕಡ್ಡಾಯ. ಹೀಗಾಗಿ ಡಿ.31ರೊಳಗೆ ಕೆವೈಸಿ ಮಾಡಿಸಬೇಕು ಎಂಬ ಸಂದೇಶ ಎಲ್ಲೆಡೆ ಹರಿದಾಡಿದ ಹಿನ್ನೆಲೆಯಲ್ಲಿ ಗ್ರಾಮದ ಗ್ಯಾಸ್‌ ವಿತರಣೆ ಕಚೇರಿ ಮುಂದೆ ಜನರು ಬೃಹತ್‌ ಪ್ರಮಾಣದಲ್ಲಿ ಸೇರಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಗೃಹಬಳಕೆ ಸಿಲಿಂಡರ್‌ ಸಬ್ಸಿಡಿ ಖಾತೆಗೆ ಜಮೆ ಆಗಬೇಕಾದರೆ ಇಕೆವೈಸಿ ಮಾಡುವುದು ಕಡ್ಡಾಯ. ಹೀಗಾಗಿ ಡಿ.31ರೊಳಗೆ ಕೆವೈಸಿ ಮಾಡಿಸಬೇಕು ಎಂಬ ಸಂದೇಶ ಎಲ್ಲೆಡೆ ಹರಿದಾಡಿದ ಹಿನ್ನೆಲೆಯಲ್ಲಿ ಗ್ರಾಮದ ಗ್ಯಾಸ್‌ ವಿತರಣೆ ಕಚೇರಿ ಮುಂದೆ ಜನರು ಬೃಹತ್‌ ಪ್ರಮಾಣದಲ್ಲಿ ಸೇರಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾದ ಘಟನೆ ನಡೆಯಿತು.

ಗ್ರಾಮದಲ್ಲಿನ ಶೆಟ್ಟರ್ ಇಂಡಿಯನ್ ಗ್ರಾಮೀಣ ವಿತರಕ ಕಲಾದಗಿ ಗ್ಯಾಸ್ ಕಚೇರಿಯಲ್ಲಿ ಇಕೆವೈಸಿ ಮಾಡಿಸಲು ಜನ ನೂಕು ನುಗ್ಗಲು ಉಂಟಾಗಿತ್ತು. ಏಜೆನ್ಸಿಯವರಿಗೆ ಜನ ನಿಭಾಯಿಸುವುದು ಸವಾಲಾಯಿತು. ಇದರಿಂದಾಗಿ ಗ್ಯಾಸ್ ವಿತರಕ ಕಚೇರಿಯ ತಂತಿ ಬೇಲಿ ಕಿತ್ತು ಹೋಗಿದೆ. ತಂತಿ ಬೇಲಿ ಕಲ್ಲು ಕಂಬ ಮುರಿದಿದೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕ ಮಲ್ಲಿನಾಥ ಶೆಟ್ಟರ್ ಹೇಳಿದರು.

ಈ ಭಾಗದ ಸುತ್ತಮುತ್ತಲಿನ ೩೦ ಹಳ್ಳಿಗಳ ಗ್ಯಾಸ್ ಸಂಪರ್ಕಿತ ಗ್ರಾಹಕರು ಗ್ಯಾಸ್ ಕಚೇರಿಗೆ ಜಮಾಯಿಸಿ ಇಕೆವೈಸಿಗೆ ಮುಗಿ ಬೀಳುತ್ತಿದ್ದಾರೆ. ಮಂಗಳವಾರ ಸರ್ವರ್ ಸಮಸ್ಯೆ ಉಂಟಾಗಿ ಇಕೆವೈಸಿ ಮಾಡುವುದನ್ನು ಕೆಲಕಾಲ ಸ್ಥಗಿತ ಮಾಡಲಾಗಿದೆ ಎಂದು ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ತಿಳಿಸಿದರು.

ಬೆಳಗ್ಗೆ 5 ಗಂಟೆಗೆ ಸಾಲು:

ಗ್ಯಾಸ್ ಗ್ರಾಹಕರು ತಮ್ಮ ಆಧಾರ್ ಕಾರ್ಡ್‌, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕ್ ಹಿಡಿದು ಬೆಳಗ್ಗೆ ೫ ಗಂಟೆಗೆ ಬಂದು ಇಕೆವೈಸಿ ಮಾಡಿಸಿಕೊಳ್ಳಲು ಸರದಿ ಸಾಲು ಗಟ್ಟಿ ನಿಲ್ಲುತ್ತಿದ್ದಾರೆ. ಬೆಳಗ್ಗೆ ಆಗುತ್ತಿದ್ದಂತೆಯೇ ಸಾವಿರಾರು ಗ್ರಾಹಕರು ಜಮಾವಣೆಗೊಂಡು ಸರದಿಸಾಲು ಸಾಲು ತಪ್ಪಿ ಹಿಂದೆಮುಂದೆಯಾಗಿ ನೂಕು ನುಗ್ಗಲು ಉಂಟಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಗ್ಯಾಸ್ ಗ್ರಾಹಕರು ಡಿ.೩೧ರೊಳಗೆ ಇಕೆವೈಸಿ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದ್ದು, ಸರ್ವರ್ ಸಮಸ್ಯೆ ಇಲ್ಲದಿದ್ದಲ್ಲಿ ಒಂದು ನಿಮಿಷಕ್ಕೆ ಇಬ್ಬರು ಗ್ರಾಹಕರ ಇಕೆವೈಸಿ ಆಗುವುದು ಹಿಡಿದರೂ ಇಂದು ಗಂಟೆಗೆ ೧೨೦ ಗ್ರಾಹಕರದ್ದಾಗುತ್ತದೆ. ದಿನದಲ್ಲಿ ೮ ಗಂಟೆ ಮಾಡಿದರೂ ಅಂದಾಜು ೮೦೦, ೯೦೦ ಗ್ರಾಕರದ್ದಾಗುತ್ತದೆ. ಹಾಗಾಗಿ ಗ್ರಾಹಕರು ಗೊಂದಲ ವದಂತಿಗಳಿಗೆ ಕಿವಿಗೊಡದೇ ಸಹಕಾರದಿಂದ ಇಕೆವೈಸಿ ಮಾಡಿಸಿಕೊಳ್ಳಲು ಗ್ಯಾಸ್ ಎಜೆನ್ಸಿಯವರ ಮಾಡಿಕೊಂಡಿದ್ದಾರೆ.

---

ಕೋಟ್‌

ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ ೭ ಗಂಟೆಯಿಂದಲೇ ಇಕೆವೈಸಿ ಮಾಡಲು ಪ್ರಾರಂಭಿಸಿ ಸಂಜೆ ೪ ಗಂಟೆಯವರೆಗೂ ಮಾಡಲಾಗುತ್ತಿದೆ. ಇಲ್ಲಿಯವರೆಗೂ ೩೦೦೦ ಗ್ರಾಹಕರ ಇಕೆವೈಸಿ ಮಾಡಲಾಗಿದೆ. ಸದ್ಯ ೨ ಕೌಂಟರ್‌ನಲ್ಲಿ ಇಕೆವೈಸಿ ಮಾಡಲಾಗುತ್ತಿತ್ತು. ಇನ್ನೊಂದು ಕೌಂಟರ್ ಮಾಡಲಾಗುವುದು. ಪ್ರತಿಯೊಬ್ಬ ಗ್ರಾಹಕರೂ ಇಕೆವೈಸಿ ಮಾಡಿಸಿಕೊಳ್ಳಬೇಕು. ಕಂಪನಿಯಿಂದ ಡಿ.೩೧ರೊಳಗೆ ಇಕೆವೈಸಿ ಮಾಡಿ ಎಂದು ಆದೇಶ ಇದೆ.

-ಮಲ್ಲಿನಾಥ ಶೆಟ್ಟರ್, ಶೆಟ್ಟರ್ ಇಂಡಿಯನ್ ಗ್ರಾಮೀಣ್ ವಿತರಕ ಕಲಾದಗಿ ಗ್ಯಾಸ್ ಏಜೆನ್ಸಿ ಮಾಲೀಕರು------

ನಾನು ಕೂಲಿ ಕೆಲಸಕ್ಕೆ ಹೋಗುವುದು ಬಿಟ್ಟು ಇಕೆವೈಸಿ ಮಾಡಿಸಲು ಬಂದಿದ್ದೇನೆ. ಸರದಿ ಸಾಲು ನಿಂತರೂ ಪಾಳೆ ಬರುತ್ತಿಲ್ಲ. ದೂರದಿಂದ ಬಸ್‌ಗೆ ಬಂದಿದ್ದೇನೆ. ಮತ್ತೆ ಮತ್ತೆ ಬರಲು ನಮಗೆ ಸಾಧ್ಯವಾಗುವುದಿಲ್ಲ. ಇವತ್ತು ಸರ್ವರ್ ಇಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಕಷ್ಟ ಯಾರಿಗೆ ಹೇಳುವುದು.

- ರೇಣವ್ವ ಕಳಸಗೌಡ, ಅರಕೇರಿ ಗ್ರಾಮ