ಸಾರಾಂಶ
ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯ ಪ್ರವಾಸಿ ಮಂದಿರದಲ್ಲಿ ಗುರುವಾರ ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಹಾಗೂ ಪುರಸಭೆ ಸದಸ್ಯರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಅಗೌರವಯುತವಾಗಿ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಹೋರಾಟದ ರೂಪರೇಷ ತಯಾರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ರಾಜ್ಯ ಬಿಜೆಪಿ ವಕ್ಫ್ ಮಂಡಳಿ ನಡೆ ವಿರುದ್ಧ ಕರೆ ನೀಡಿದ ಪ್ರತಿಭಟನೆ ವೇಳೆ ಪಟ್ಟಣದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲು ಒಂದೆರೆಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ತಹಸೀಲ್ದಾರ್‌ಗೆ ಮಲಗಿದ್ಯಾ, ಡಿಸಿ ಹೋಗ್‌ಬ್ಯಾಡ್ ಅಂದಾರೇನು, ದುಡ್ಡು ಕೊಟ್ಟು ಪೊಷ್ಟಸಿಂಗ್ ಮಾಡಿಸಿಕೊಂಡು ಬಂದಿರುತ್ತೀರಿ ಎನ್ನುವುದರ ಜತೆಗೆ ಪ್ರತಿದಿನ ನಿಗಾ ಇಡಬೇಕಾಗುತ್ತದೆ ಎನ್ನುವ ಮೂಲಕ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇದನ್ನು ಖಂಡಿಸಿ ಜಿಲ್ಲೆ ವಿವಿಧ ತಾಲೂಕುಗಳಲ್ಲಿ ಮಾಜಿ ಶಾಸಕರ ನಡೆ ಖಂಡಿಸಿ ನೌಕರರು ಮನವಿ ನೀಡಿದ್ದು ಮಾಜಿ ಸಚಿವ ಕಳಕಪ್ಪ ಬಂಡಿ ಅಧಿಕಾರಿಗಳಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎಸ್. ಶೀಲವಂತರ ಆಗ್ರಹಿಸಿದರು.ಮುಖಂಡರಾದ ಎಚ್.ಎಸ್. ಸೋಂಪುರ, ರಾಜು ಸಾಂಗ್ಲೀಕರ ಹಾಗೂ ಮುರ್ತುಜಾ ಡಾಲಾಯತ್ ಮಾತನಾಡಿ, ಈ ಹಿಂದೆ ಕನ್ನಡಪರ, ದಲಿತಪರ ಹಾಗೂ ವಿಪಕ್ಷಗಳು ನಡೆಸಿದ ಹೋರಾಟದ ವೇಳೆ ಹಾಗೂ ಹೆಸ್ಕಾಂ ಕಚೇರಿ ಎದುರು ರೈತರು ವಿದ್ಯುತ್ ಪೂರೈಕೆಗಾಗಿ ನಡೆಸಿದ ಯಾವ ಹೋರಾಟದ ಮನವಿ ಸ್ವೀಕರಿಸಿದ್ದೀರಿ. ನಿಮ್ಮ ಆಡಳಿತಕ್ಕೆ ಬೇಸತ್ತು ಜನರು ನಿಮ್ಮನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ, ಅಧಿಕಾರಿಗಳ ಮೇಲೆ ಹೀಗೆ ಸಿಟ್ಟು, ಅಗೌರಯುತವಾಗಿ ಮಾತನಾಡಿದರೆ ಅಧಿಕಾರಿಗಳು ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುವಂತಾಗುತ್ತದೆ. ಹಣಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬರುತ್ತೀರಿ ಎಂದು ಆರೋಪಿಸುವ ನೀವು, ನಿಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಸಂಸ್ಕೃತಿ ಇಂತಾ ಎಂದು ಪ್ರಶ್ನಿಸಿದರು.
ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ, ಮಾಜಿ ಶಾಸಕರು ವರ್ತನೆಯಿಂದ ಕ್ಷೇತ್ರದ ಜನತೆ ಖಂಡಿಸುತ್ತಿದ್ದಾರೆ. ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗೆ ಸ್ವಚ್ಛಗೊಳಿಸಲು ಪುರಸಭೆ ₹೧೦-೧೧ ಲಕ್ಷ ಹಣ ದುರ್ಬಳಕೆ ಸೇರಿದಂತೆ ಇತರ ಕೆಲ ಸಂದರ್ಭಗಳಲ್ಲಿ ನೀವು ನಡೆಸಿದ ಆಡಳಿತವನ್ನು ಜನತೆ ಮರೆತಿಲ್ಲ. ನೀವು ಅಧಿಕಾರದಲ್ಲಿದ್ದಾಗ ಎಷ್ಟು ಹುದ್ದೆಗಳು ಖಾಲಿ ಇದ್ದವು ಎನ್ನುವದನ್ನು ನೆನಪುಮಾಡಿಕೊಳ್ಳಿ. ನಮ್ಮ ಶಾಸಕ ಜಿ.ಎಸ್.ಪಾಟೀಲ ಸಭ್ಯ ರಾಜಕಾರಣಿ. ತಾವು ಮಾಡಿದಂತೆ ಎಲ್ಲರೂ ಮಾಡುತ್ತಾರೆ ಎಂದು ಮಾಜಿ ಶಾಸಕರು ಭಾವಿಸಿದಂತೆ ಕಾಣುತ್ತಿದೆ ಎಂದ ಅವರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಮಾಜಿ ಶಾಸಕರ ವರ್ತನೆ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದರು.ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುದಿಯಪ್ಪ ಮುಧೋಳ, ಶರಣಪ್ಪ ಉಪ್ಪಿನಬೆಟಗೇರಿ, ಸದಸ್ಯರಾದ ವೆಂಕಟೇಶ ಮುದಗಲ್, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹೂಗಾರ, ರಫೀಕ್ ತೋರಗಲ್, ಉಮೇಶ ರಾಠೋಡ ಹಾಗೂ ಯಲ್ಲಪ್ಪ ಬಂಕದ, ರಾಮಚಂದ್ರ ಹುದ್ದಾರ ಸೇರಿದಂತೆ ಇತರರು ಇದ್ದರು.