ಸಾರಾಂಶ
ನಿರಂತರ ರಂಗಭೂಮಿಯನ್ನು ಬದ್ಧತೆಯೊಂದಿಗೆ ಕಟ್ಟುತ್ತಿದೆ. ನಿರಂತರದ ನಾಟಕಗಳು ಮತ್ತು ಚಟುವಟಿಕೆಗಳು ಶಿಸ್ತಿನಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಕೂಡಿರುತ್ತವೆ
ಕನ್ನಡಪ್ರಭ ವಾರ್ತೆ ಮೈಸೂರು
ರಂಗಭೂಮಿ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಬೇಕು. ಮುಂದಿನ ತಲೆಮಾರುಗಳು ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಆಶಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಿರಂತರ ಫೌಂಡೇಶನ್ ಆಯೋಜಿಸಿರುವ ನಿರಂತರ ರಂಗ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮ ಹಿಂದೂಸ್ತಾನಿ ಗಾಯಕ ಉಸ್ತಾದ್ ಫೈಯಾಜ್ ಖಾನ್ ಅವರ ಸಂಗೀತ ಸಂಜೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ರಂಗ ಪ್ರದರ್ಶನಗಳಿಗೆ ಅನುಗುಣವಾಗಿರುವ ಸ್ಥಳಗಳು ತಂಡಗಳಿಗೆ ಸುಲಭವಾಗಿ ಒದಗುವಂತಾಗುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು ಎಂದು ತಿಳಿಸಿದರು.ನಿರಂತರ ರಂಗಭೂಮಿಯನ್ನು ಬದ್ಧತೆಯೊಂದಿಗೆ ಕಟ್ಟುತ್ತಿದೆ. ನಿರಂತರದ ನಾಟಕಗಳು ಮತ್ತು ಚಟುವಟಿಕೆಗಳು ಶಿಸ್ತಿನಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಕೂಡಿರುತ್ತವೆ. ಕಳೆದ ಅನೇಕ ವರ್ಷಗಳಿಂದ ಮೈಸೂರಿನ ರಂಗಭೂಮಿಯಲ್ಲಿ ನಿರಂತರ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ನಿರಂತರ ಸಾಮಾಜಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಅವರು ಶ್ಲಾಘಿಸಿದರು.ನಂತರ ನಡೆದ ಸಂಗೀತ ಸಂಜೆಯಲ್ಲಿ ಉಸ್ತಾದ್ ಫೈಯಾಜ್ ಖಾನ್ ಅವರ ಹಿಂದೂಸ್ತಾನಿ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವೀರಭದ್ರಯ್ಯ ಹಿರೇಮಠ್, ತಬಲದಲ್ಲಿ ರಮೇಶ್ ಧನ್ನೂರ್ ಸಾಥ್ ನೀಡಿದರು.ಪೊ. ಕಾಳೇಗೌಡ ನಾಗವಾರ, ಪೊ. ಕಾಳಚೆನ್ನೇಗೌಡ, ದೇವನೂರ ಬಸವರಾಜ್, ಡಾ. ನರೇಂದ್ರಸ್ವಾಮಿ, ಡಾ. ಲೋಕೇಶ್ ಮೊಸಳೆ, ನಿರಂತರದ ಎಂ.ಎಂ. ಸುಗುಣ, ಶ್ರೀನಿವಾಸು ಪಾಲಹಳ್ಳಿ ಇದ್ದರು.