ಸಾರಾಂಶ
ಕಲಾಮಂದಿರದ ಆವರಣದಲ್ಲಿ ಪುತ್ತೂರಿನ ನವೀನ್ ಕುಮಾರ್ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಛಾಯಾಚಿತ್ರಗಳು ಮತ್ತು ರಂಗಾಯಣ ನಾಟಕಗಳ ಭಿತ್ತಿಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಕಲಾಮಂದಿರ ಆವರಣದಲ್ಲಿ ನಾಲ್ಕು ಕಡೆ ಆಯೋಜಿಸಿರುವ ದೃಶ್ಯಕಲಾ ಪ್ರದರ್ಶನವನ್ನು ಹಿರಿಯ ರಂಗಕರ್ಮಿ, ನಟ ಅತುಲ್ ಕುಲಕರ್ಣಿ ಮಂಗಳವಾರ ಉದ್ಘಾಟಿಸಿದರು.ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಕಲಾ ರಸಿಕರಿಗೆ ದೃಶ್ಯ ಕಲಾ ವೈಭವವು ಗಮನ ಸೆಳೆಯಿತು. ಕೇರಳದ ಕೊಟ್ಟಾಯಂನ ಅಭಿರಾಮಿ ಅವರ ಕುಂಚದಲ್ಲಿ ಮೂಡಿ ಬಂದ ವರ್ಣಚಿತ್ರ ಕಲಾ ಪ್ರದರ್ಶನ ಕಿರು ರಂಗಮಂದಿರ ಆವರಣದಲ್ಲಿ ಅನಾವರಣಗೊಂಡಿತು. ಕೇರಳದ ಸ್ಮೃದಲ್ ಇ. ಕಣ್ಣೂರು ಅವರಿಂದ ಕೆತ್ತನೆಯಾದ ಶಿಲ್ಪ ಕಲಾ ಪ್ರದರ್ಶನ ಗಮನ ಸೆಳೆಯಿತು.
ಕಲಾಮಂದಿರದ ಆವರಣದಲ್ಲಿ ಪುತ್ತೂರಿನ ನವೀನ್ ಕುಮಾರ್ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಛಾಯಾಚಿತ್ರಗಳು ಮತ್ತು ರಂಗಾಯಣ ನಾಟಕಗಳ ಭಿತ್ತಿಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.ಈ ವೇಳೆ ನಟ ಪ್ರಕಾಶ್ ರಾಜ್, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.
ನಾಟಕಗಳ ಪ್ರದರ್ಶನ- ಜನಪದ ವೈಭವಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ದಿನ ಭೂಮಿಗೀತದಲ್ಲಿ ಕಾಣೆ ಆದವರು (ಕನ್ನಡ) ಮತ್ತು ಕಿರು ರಂಗಮಂದಿರದಲ್ಲಿ ಪಾಕುದೂರಾಳ್ಳು (ತೆಲುಗು) ನಾಟಕ ಪ್ರದರ್ಶನಗೊಂಡವು.
ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ಕೊಂಕಣಿ ಖಾರ್ವಿ ಮತ್ತು ಗುಡುಂ ಬಾಜಾ ಜಾನಪದ ನೃತ್ಯ ವಿಶೇಷವಾಗಿ ಗಮನ ಸೆಳೆಯಿತು. ಭಟ್ಕಳದ ಕೊಂಕಣಿ ಖಾರ್ವಿ ಕಲಾ ಮಾಂಡ್ ತಂಡದಿಂದ ಕೊಂಕಣಿ ಖಾರ್ವಿ ನೃತ್ಯ, ಮಧ್ಯಪ್ರದೇಶದ ತಂಡದಿಂದ ಗುಡುಂ ಬಾಜಾ ನೃತ್ಯ ಕಾರ್ಯಕ್ರಮ ನಡೆಯಿತು.