ಸಾರಾಂಶ
ಹಾವೇರಿ: ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದಿಂದ ಮಾಜಿ ರಾಷ್ಟ್ರಪತಿ ದಿ.ಡಾ.ಎಪಿಜೆ ಅಬ್ದುಲ್ ಕಲಾಂ ಅವರ ೯ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಈ ವೇಳೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಲ್ಲಭಕ್ಷ ತಿಮ್ಮಾಪೂರ ಮಾತನಾಡಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ಮಾತೆಯ ಹೆಮ್ಮೆಯ ಸುಪುತ್ರರು, ಜಾಗತಿಕ ಮಟ್ಟದಲ್ಲಿ ಭಾರತ ಇಂದು ಸುಪರ್ ಪವರ್ ಆಗಲು ವೈಜ್ಞಾನಿಕ ಯುಗದಲ್ಲಿ ಇವರು ಹಾಕಿಕೊಟ್ಟ ತಳಹದಿ ಕಾರಣವಾಗಿದೆ. ಜಾತಿ ಎಲ್ಲೆಯ ಮೀರಿ ಬೆಳೆದಂತ ವಿಜ್ಞಾನಿ, ಭಾರತ ರತ್ನ ಯುವ ಸಮುದಾಯಕ್ಕೂ ಒಂದು ಮಾದರಿಯಾಗಿದ್ದಾರೆ. ದೇಶ ಮೊದಲು ಅನ್ನುವ ಧ್ಯೇಯದೊಂದಿಗೆ ಕ್ಷಿಪಣಿ ಜನಕರಾಗಿ, ದೇಶದ ರಕ್ಷಣೆಗಾಗಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ದೇಶದ ೧೧ನೇ ರಾಷ್ಟ್ರಪತಿಯಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅನನ್ಯ ಕೊಡುಗೆ ನೀಡಿ ಅಂದಿನ ಸರ್ಕಾರದಲ್ಲಿ ಪ್ರೋಕ್ರಾನ್ ಅಣುಬಾಂಬ್ ಪರೀಕ್ಷಾರ್ಥವಾಗಿ ನಡೆಸಿದ ವಿಜ್ಞಾನಿಯಾಗಿದ್ದಾರೆ. ಪ್ರಧಾನಿ ವಾಜಪೇಯಿ ಜೊತೆಗೂಡಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು. ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಡಾ. ಎಪಿಜೆ ಅಬ್ದುಲ್ ಕಲಾಂ ರವರು ತಮ್ಮ ಬಾಲ್ಯ ದಿನಗಳಲ್ಲಿ ದಿನ ಪತ್ರಿಕೆಗಳನ್ನು ಹಂಚುವ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಬಹಳ ಅಚ್ಚುಕಟ್ಟು ನಿರ್ವಹಿಸಿದರು. ಅದೇ ರೀತಿ ಅವಿವಾಹಿತರಾಗಿ ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಏಕೈಕ ವ್ಯಕ್ತಿ. ಇಂತಹ ಮಹನೀಯರ ಸ್ಮರಣೆ ಮಾಡುತ್ತಿರುವುದು ಅವಿಸ್ಮರಣೀಯ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ನಸರುಲ್ಲಾ ಮುಲ್ಲಾ ಮಾತನಾಡಿದರು. ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಜಾಲತಾಣ ಪ್ರಮುಖ ಮಹ್ಮದ್‌ಸಾಧಿಕ್ ಮುಜಾವರ ನಿರೂಪಿಸಿದರು. ಮರ್ದಾನಸಾಬ ಸುಳ್ಳಳ್ಳಿ ಸ್ವಾಗತಿಸಿದರು. ಅಬ್ದುಲ್ ರಜಾಕ ನೆಗಳೂರ ವಂದಿಸಿದರು.