ಕಳಸಪಟ್ಟಣದ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಬೋರ್ಡ್ಗಳನ್ನು ಅಳವಡಿಸುವುದು ಹಾಗೂ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಕಳಸ ಗ್ರಾಮ ಪಂಚಾಯಿತಿ ಮುಂದಾಗಿದೆ.

ಗ್ರಾಪಂನಿಂದ ವ್ಯಾಪಾರಕ್ಕೆ ಬ್ರೇಕ್; ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ ,ಕಳಸ

ಪಟ್ಟಣದ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಬೋರ್ಡ್ಗಳನ್ನು ಅಳವಡಿಸುವುದು ಹಾಗೂ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಕಳಸ ಗ್ರಾಮ ಪಂಚಾಯಿತಿ ಮುಂದಾಗಿದೆ.

ಸಾರ್ವಜನಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ನಿರ್ಮಿಸಿರುವ ಫುಟ್‌ಪಾತ್‌ಗಳೇ ಇದೀಗ ಅಂಗಡಿಗಳ ವಿಸ್ತರಣೆ, ಜಾಹೀರಾತು ಬೋರ್ಡ್ಗಳು ಹಾಗೂ ವಿವಿಧ ವ್ಯಾಪಾರ ಚಟುವಟಿಕೆಗೆ ಬಳಕೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಾರಾಂತ್ಯದಲ್ಲಿ ವಾಹನ ದಟ್ಟಣೆಯಿಂದ ರಸ್ತೆ ಮೇಲೆ ಸಂಚರಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಫುಟ್‌ಪಾತ್‌ಗಳೂ ವ್ಯಾಪಾರಿಗಳ ಪಾಲಾಗಿರುವುದರಿಂದ ಸಾರ್ವಜನಿಕರು ಅಕ್ಷರಶಃ ಅತಂತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗ್ರಾಮಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಳಸ ಗ್ರಾಮ ಪಂಚಾಯಿತಿ ಪಿಡಿಒ ಕವೀಶ್ ಸೋಮವಾರದಿಂದಲೇ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಫುಟ್‌ಪಾತ್ ಸಾರ್ವಜನಿಕರು ನಡೆದುಕೊಂಡು ಹೋಗಲು ಇರುವ ಜಾಗ. ಅಲ್ಲಿ ಬೋರ್ಡ್ಗಳನ್ನು ಇಡುವುದಾಗಲಿ, ವ್ಯಾಪಾರ ಮಾಡುವು ದಾಗಲಿ ಸಹಿಸುವುದಿಲ್ಲ. ಫುಟ್‌ಪಾತ್ ಮೇಲೆ ಯಾವುದೇ ವಸ್ತು ಕಂಡುಬ೦ದರೂ ಪಂಚಾಯಿತಿ ಮುಟ್ಟುಗೋಲು ಹಾಕಿಕೊಳ್ಳ ಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ವಿಚಾರದಲ್ಲೂ ಪಂಚಾಯಿತಿ ಕಠಿಣ ನಿಲುವು ತಳೆದಿದೆ. ಪ್ರತಿಯೊಬ್ಬರೂ ಹಸಿಕಸ ಮತ್ತು ಒಣಕಸವನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಪಂಚಾಯಿತಿಗೆ ನೀಡಬೇಕು ಎಂದು ಪಿಡಿಒ ಸೂಚಿಸಿದ್ದಾರೆ

ಮುಖ್ಯ ರಸ್ತೆಯ ಅಂಚಿನಲ್ಲಿರುವ ಫುಟ್‌ಪಾತ್‌ಗಳ ಮೇಲೆ ವಾಹನ ಹತ್ತಿಸುವುದರಿಂದ ಚಪ್ಪಡಿಗಳು ಪದೇಪದೇ ತುಂಡಾ ಗುತ್ತಿದ್ದು, ಸಾರ್ವಜನಿಕ ಆಸ್ತಿಯ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿ ಜತೆಗೆ ಸಾರ್ವಜನಿಕರೂ ಜವಾಬ್ದಾರಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರೇಂದ್ರ ಒತ್ತಾಯಿಸಿದರು.

ಕಳಸ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಫುಟ್‌ಪಾತ್‌ಗಳ ಚಪ್ಪಡಿಗಳು ವಾಹನಗಳ ಸಂಚಾರದಿದ ಹಾನಿಗೊಳಗಾಗುತ್ತಿರುವ ಬಗ್ಗೆ ಗಮನ ಸೆಳೆದರು.

ಗ್ರಾಮಸಭೆಯಲ್ಲಿ ರಿಜ್ವಾನ್ ಮಾತನಾಡಿ ಬಿಡಾಡಿ ದನಗಳು ಹಾಗೂ ನಾಯಿಗಳು ಪೇಟೆ ಬಾಗದಲ್ಲಿ ವಿಪರೀತ ಹೆಚ್ಚಾಗಿದ್ದು, ಇದರ ಬಗ್ಗೆ ಸೂಕ್ತ ಪರಿಹಾರ ಮಾರ್ಗ ಕಂಡುಕೊಳ್ಳಲು ಸೂಚಿಸಿದರು. ನಾಯಿ ಹಾಗೂ ದನಗಳು ರಸ್ತೆಯಲ್ಲಿಯೇ ಬೀಡು ಬಿಟ್ಟಿದ್ದು ಈಗಾಗಲೇ ಸಾಕಷ್ಟು ಜನ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ, ಮತ್ತು ಸಾಕಷ್ಟು ವಾಹನಗಳು ತೊಂದರೆಗೊಳಗಾಗಿವೆ. ರಸ್ತೆಯಲ್ಲಿ ಎತ್ತುಗಳ ಕಾದಾಟದಿಂದಾಗಿ ಸಾರ್ವಜನಿಕರು ಓಡಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.