ಇಲ್ಲಿಗೆ ಸಮೀಪ ಕಳತ್ಮಾಡು- ಹೊಸೂರು ಗ್ರಾಮದಲ್ಲಿ ಎಮ್ಮೆ ಮತ್ತು ಕೋಣಗಳು ನಿಗೂಢ ಕಾಯಿಲೆಯಿಂದ ಮೃತಪಟ್ಟಿರುವುದು ಹೈನುಗಾರರ ಆತಂಕಕ್ಕೆ ಕಾರಣವಾಗಿದೆ.
ಗೋಣಿಕೊಪ್ಪ: ಇಲ್ಲಿಗೆ ಸಮೀಪ ಕಳತ್ಮಾಡು- ಹೊಸೂರು ಗ್ರಾಮದಲ್ಲಿ ಎಮ್ಮೆ ಮತ್ತು ಕೋಣಗಳು ನಿಗೂಢ ಕಾಯಿಲೆಯಿಂದ ಮೃತಪಟ್ಟಿರುವುದು ಹೈನುಗಾರರ ಆತಂಕಕ್ಕೆ ಕಾರಣವಾಗಿದೆ. ಕೃಷಿಕ ಕೊಲ್ಲೀರ ಉಮೇಶ್ ಮತ್ತುಗಯಾ ಕಾವೇರಪ್ಪ ಸಹೋದರರಿಗೆ ಸೇರಿದ ಸುಮಾರು 7 ಎಮ್ಮೆ ಮತ್ತು ಕರುಮೃತಪಟ್ಟ ಘಟನೆ ನಡೆದಿದೆ. ಕಳೆದ 15 ದಿನದಲ್ಲಿ ಈ ಸರಣಿ ಸಾವು ಸಂಭವಿಸಿದೆ ಎನ್ನಲಾಗಿದೆ. ಪಶು ಸಂಗೋಪನಾ ಇಲಾಖೆ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದರೂ ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕೊಡಗು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಲಿಂಗರಾಜ್ ದೊಡ್ಡಮನಿ, ಅಮ್ಮತ್ತಿ ಪಶು ವೈದ್ಯಕೀಯ ಇಲಾಖೆಯ ಡಾ.ನವೀನ್, ಪೊನ್ನಂಪೇಟೆಯ ಪಶುವೈದ್ಯಾಧಿಕಾರಿ ಡಾ.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾದೇಶಿಕ ಡಯಾಗ್ನೋಸ್ಟಿಕ್ ಪ್ರಯೋಗಾಲಯ, ಮೈಸೂರಿನ ವಿಜ್ಞಾನಿ ಡಾ.ಸುಮಂತ್ ಅವರು ಸ್ಥಳಕ್ಕೆ ಆಗಮಿಸಿದ್ದು ಎಮ್ಮೆಯ ಸಗಣಿ ಮತ್ತು ಇತ್ಯಾದಿಗಳನ್ನು ಸಂಗ್ರಹಿಸಿ ಹೆಚ್ಚಿನ ಸಂಶೋಧನೆಗಾಗಿ ಮೈಸೂರಿಗೆ ಕೊಂಡೊಯ್ದಿದ್ದಾರೆ. ಈ ಭಾಗದ ರೈತರ ಜಾನುವಾರುಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿದರೆ ಕೂಡಲೇ ಮಾಹಿತಿ ನೀಡುವಂತೆ ಹೊಸೂರು ಮಾಜಿ ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ತಿಳಿಸಿದ್ದಾರೆ.ರಕ್ತದ ಮಾದರಿ ಪ್ರಯೋಗಾಲಯಕ್ಕೆ: ಪೊನ್ನಂಪೇಟೆ ಪಶುವೈದ್ಯ ಡಾ.ಗಿರೀಶ್ ಮಾತನಾಡಿ, ಅಂಥ್ರಾಕ್ಸ್ ಕಾಯಿಲೆ ಅಲ್ಲ, ತೊಂಡೆಗಟ್ಟಿ, ಕಾಲು ಬಾಯಿ ಜ್ವರ, ಚಪ್ಪೆ ರೋಗ, ಚರ್ಮ ರೋಗ ಇತ್ಯಾದಿ ಯಾವುದೂ ದೃಢಪಟ್ಟಿಲ್ಲ. ಬುಧವಾರ ಮರಣ ಹೊಂದಿದ ಎಮ್ಮೆಯ ರಕ್ತದ ಮಾದರಿ ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಶೀಘ್ರವೇ ಸರಣಿ ಸಾವಿಗೆ ಕಾರಣ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ. ಮೊದಲಿಗೆ ವಿಷ ಪ್ರಾಶನದಿಂದ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿತ್ತು. ನಂತರ ವಿಷ ಸೇವನೆಯಾಗಿಲ್ಲ ಎಂದು ವರದಿ ಬಂದಿದೆ.
