ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಕೂಟಗಲ್ ಮತ್ತು ಕಸಬಾ ಹೋಬಳಿಗಳ ಭಾಗದ ಬರಪೀಡಿತ ಗ್ರಾಮಗಳ ಬಹುದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದ್ದು, ಅರ್ಕಾವತಿ ನದಿಯಿಂದ ನೀರು ಹರಿಸುವ ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲು ಮುಹೂರ್ತ ಕೂಡಿ ಬಂದಿದೆ.ಕೂಟಗಲ್ ಮತ್ತು ಕಸಬಾ ಹೋಬಳಿ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಗೆ ಕಳೆದ 14 ವರ್ಷಗಳಿಂದಲೂ ಬೇಡಿಕೆ ಇತ್ತು. ಈಗ ರಾಜ್ಯ ಸರ್ಕಾರದಿಂದ ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರಕಿದ್ದು, ಅ.9ರಂದು ಬುಧವಾರ ಶಾಸಕ ಇಕ್ಬಾಲ್ ಹುಸೇನ್ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡುತ್ತಿದ್ದಾರೆ.
ಡಿ.ಕೆ.ಸುರೇಶ್ ಪರಿಶ್ರಮ ಹೆಚ್ಚು:ಅರ್ಕಾವತಿ ನದಿಯಿಂದ ನೀರನ್ನು ಎತ್ತಿ ಏತ ನೀರಾವರಿ ಮೂಲಕ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರದ ಕಸಬಾ ಹೋಬಳಿಯ ಒಟ್ಟು 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಈ ವಿಚಾರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಪ್ರಸ್ತಾಪಗೊಂಡಿತ್ತು.
ಆನಂತರ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸದರಾಗಿದ್ದ ಡಿ.ಕೆ.ಸುರೇಶ್ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆ ಬಗ್ಗೆ ಆಸಕ್ತಿ ವಹಿಸಿದರು. ಸರ್ಕಾರದ ಮೇಲೆ ಒತ್ತಡ ತಂದು 28 ಕೋಟಿ ರುಪಾಯಿ ವೆಚ್ಚದ ಏತ ನೀರಾವರಿ ಯೋಜನೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಅನುಮೋದನೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಇದೇ ಮೊದಲ ಬಾರಿಗೆ ರಾಮನಗರ ತಾಲೂಕಿನ ಕಾಳೇಗೌಡನದೊಡ್ಡಿ ಸಮೀಪದಿಂದ ಅರ್ಕಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿ, ಅಲ್ಲಿಂದ ನೀರನ್ನು ಏತ ನೀರಾವರಿ ಮೂಲಕ ಪಂಪ್ ಮಾಡಿ, ಕಾಳೇಗೌನದೊಡ್ಡಿ, ಪಾದರಹಳ್ಳಿ, ಅರೇಹಳ್ಳಿ - ಕೂನಮುದ್ದನಹಳ್ಳಿ, ಬಿಳಗುಂಬ, ಬೆಜ್ಜರಹಳ್ಳಿ ಕಟ್ಟೆ ಗ್ರಾಮಗಳ ಒಟ್ಟು 9 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಇದರ ಜತೆಗೆ ತಿಮ್ಮ ಸಂದ್ರದ ಕೆರೆಗೂ ನೀರು ಹರಿಸುವ ಬಗ್ಗೆಯೂ ಯೋಜನೆಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.
ಅರ್ಕಾವತಿ ನದಿಯಿಂದ 16.6 ಕಿ.ಮೀ ದೂರ ಸ್ಟೀಲ್ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಈ ಯೋಜನೆ ಜಾರಿಯಿಂದ ಬಿಳಗುಂಬ, ಅರೇಹಳ್ಳಿ, ಪಾದರಹಳ್ಳಿ, ಕಾಳೇಗೌಡನದೊಡ್ಡಿ, ಕೂನುಮುದ್ದನಹಳ್ಳಿ, ತಿಮ್ಮಸಂದ್ರ ಭಾಗದ ಕುಡಿಯುವ ನೀರಿನ ಭವಣೆ ನೀಗಲಿದೆ. ಈಗಾಗಲೇ ಈ ಭಾಗದಲ್ಲಿ ಮರಳು ಗಣಿಗಾರಿಕೆಯಿಂದಾಗಿ ಅಂತರ್ಜಲ ಸುಮಾರು ಸಾವಿರ ಅಡಿ ಆಳಕ್ಕೆ ಕುಸಿದಿದೆ. ಅಲ್ಲದೆ, ಈ ಭಾಗದಲ್ಲಿ ಮಾವು ಬೆಳೆ ಹೆಚ್ಚಾಗಿ ಬೆಳೆಯುವುದರಿಂದ ಮಳೆ ಕೊರತೆ ಉಂಟಾಗಿ ಬೆಳೆ ಕೈ ತಪ್ಪುವ ಆತಂಕವೂ ಹೆಚ್ಚುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚುವ ಅವಕಾಶಗಳು ತೆರೆದುಕೊಂಡಿವೆ.ಈ ಯೋಜನೆಯಲ್ಲಿ ಅಂತಿಮವಾಗಿ ರಾಮನಗರ ನಗರಕ್ಕೆ ಹೊಂದಿಕೊಂಡಿರುವ ಬೋಳಪ್ಪನಹಳ್ಳಿ ಕೆರೆಗೂ ನೀರು ಹರಿಯುವುದರಿಂದ ನಗರ ಪ್ರದೇಶದ ಹಲವು ಭಾಗಗಳ ಕೊಳವೆ ಬಾವಿಗಳು ಸಹ ಮರುಪೂರಣಗೊಂಡು ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಇಇ ಕೊಟ್ರೇಶ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.‘ಮಾಜಿ ಸಂಸದ ಡಿ.ಕೆ.ಸುರೇಶ್ ಪರಿಶ್ರಮ, ಹೋರಾಟದಿಂದಾಗಿ ಸುಮಾರು 28 ಕೋಟಿ ರು.ವೆಚ್ಚದಲ್ಲಿ ಕಾಳೇಗೌಡನ ದೊಡ್ಡಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕಾಳೇಗೌಡನದೊಡ್ಡಿ, ಬಿಳಗುಂಬ, ಅರೆಹಳ್ಳಿ, ಕೂನಮುದ್ದನಹಳ್ಳಿ, ಪಾದರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲಾಗುವುದು. ರೈತರಿಗೆ ಅನುಕೂಲವಾಗುವ ಇಂತಹ ಜನೋಪಯೋಗಿ ಕಾರ್ಯಗಳ ಮೂಲಕ ನಾವು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ.’
-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ---
ಕೆರೆಗಳ ಹೆಸರುನೀರಿನ ಸಂಗ್ರಹ ಸಾಮರ್ಥ್ಯ(in meft)ರಂಗರಾಯನ ಕಟ್ಟೆ1.00
ಸಂಜೀವನಯ್ಯನ ಕಟ್ಟೆ2.48ತೂಬಿನ ಕಟ್ಟೆ1.50
ಪಾದರಹಳ್ಳಿ ಕಟ್ಟೆ 1 1.00ಪಾದರಹಳ್ಳಿ ಕಟ್ಟೆ2 1.10
ಬೆಜ್ಜರಹಳ್ಳಿ ಕಟ್ಟೆ5.83ಅರೆಹಳ್ಳಿ ಕೆರೆ7.23
ಬಿಳಿಗುಂಬ ಕೆರೆ1.60ಬೊಳಪ್ಪನಹಳ್ಳಿ ಕೆರೆ11.05
------------------------ಒಟ್ಟು32.79