ಸಾರಾಂಶ
ಅರಸೀಕೆರೆ: ತಾಲೂಕಿನ ಕಲ್ಗುಂಡಿ ಗ್ರಾಮದ ಗೌರಮ್ಮದೇವಿ ವಿಸರ್ಜನಾ ಮಹೋತ್ಸವವು ಸೆ.28 ಮತ್ತು 29ರಂದು ಸಹಸ್ರಾರು ಭಕ್ತರ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿದ್ದ ನಡೆಯಲಿದ್ದು, ಇದಕ್ಕಾಗಿ ಗ್ರಾಮಸ್ಥರು ಸಮರೋಪಾದಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡತೊಡಗಿದ್ದಾರೆ.
ಬಹು ಅಪರೂಪದ, ಆಕರ್ಷಣೆಯುಳ್ಳ ಭೂತಾಳೆ ಮರದಲ್ಲಿ ಮಾಡಿರುವ ನಿಂತ ನಿಲುವಿನ ಗೌರಮ್ಮದೇವಿಯ ದರ್ಶನ ಭಕ್ತರು ಪಡೆಯಬೇಕಾದರೆ, ಕಲ್ಗುಂಡಿ ಗ್ರಾಮದಲ್ಲಿ ಭಾದ್ರಪದ ತದಿಗೆಯ ಗೌರಿ ಹಬ್ಬದಿಂದ ೨೦ದಿನಗಳು ಪ್ರತಿನಿತ್ಯ ಪೂಜಿಸಲ್ಪಡುವ ಸಂದರ್ಭದಲ್ಲಿ ಆಗಮಿಸಿ ಈ ಶಕ್ತಿಪೀಠದ ದರ್ಶನ ಭಾಗ್ಯ ಪಡೆಯಬಹುದಾಗಿದೆ.ತಾಲೂಕಿನ ಬಾಣಾವರ ಮಾರ್ಗದ ಕಲ್ಲುಸಾದರಹಳ್ಳಿ ಬಳಿಯ ಸಣ್ಣ ಗ್ರಾಮವೇ ಕಲ್ಗುಂಡಿ ಗ್ರಾಮ, ಈ ಕುಗ್ರಾಮಕ್ಕೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರ ಸಮೂಹ ಹರಿದು ಬರುತ್ತದೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೇವಿಯ ಮುಂದೆ ಹರಕೆ ಮಾಡಿಕೊಂಡು ಅದು ಫಲಿಸಿದ ನಂತರ ಮುಂದಿನ ವರ್ಷ ಬಂದು ಹರಕೆ ತೀರಿಸುವುದು ಇಲ್ಲಿನ ವಿಶೇಷಗಳಲ್ಲೊಂದು.
ಈ ಧಾರ್ಮಿಕ ಕ್ಷೇತ್ರದಲ್ಲಿ ಒಟ್ಟು ೧೬ ದೇವಾಲಯಗಳಿದ್ದು, ಎಲ್ಲಾ ದೇವರಿಗೂ ಪ್ರತಿನಿತ್ಯ ಪೂಜೆ ಕಾರ್ಯಗಳು ವಿಶೇಷವಾಗಿ ನಡೆಯುತ್ತಿರುತ್ತದೆ. ಇಲ್ಲಿನ ಭೂತಾಳೆ ಗೌರಮ್ಮನಿಗೆ ಅಪರೂಪದ ದೈವಿಶಕ್ತಿ ಇದ್ದು, ಪ್ರತಿವರ್ಷದ ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಭಾದ್ರಪದ ಗೌರಿ ಹಬ್ಬದಂದು ಸೆ. 6 ರಂದು ಗೌರಿಗುಡಿಯಲ್ಲಿ ಶಿರಸ್ಸಿನ ರೂಪದಲ್ಲಿ ದೇವಿ ಪ್ರತಿಷ್ಠಾಪಿಸಿ ಪ್ರತಿನಿತ್ಯ ಸರದಿ ಪ್ರಕಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ತದನಂತರ ಸೆ.24ರ ಮುಂಜಾನೆ ಸೂರ್ಯೋದಯಕ್ಕೆ ಮುಂಚಿತವಾಗಿ ಭೂತಾಳೆ ಗೌರಮ್ಮನಿಗೆ ಕಡಲೇ ಹಿಟ್ಟು, ಬೆಣ್ಣೆಯಿಂದ ತಿದ್ದಿ ನಿಂತ ನಿಲುವಿನ ಸ್ವರ್ಣಗೌರಿ ಸ್ವರೂಪವನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯೂ ಸಾಕ್ಷಾತ್ ಅನ್ನಪೂರ್ಣೇಶ್ವರಿ ಮಾತೆಯಲ್ಲಿ ಭಕ್ತರಿಗೆ ದರ್ಶನ ಭಾಗ್ಯವನ್ನು ಕರುಣಿಸಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಭಕ್ತರು ಹರಕೆ ಕಾಣಿಕೆಗಳನ್ನು ನೀಡಿ ಗುಗ್ಗಳ ಸೇವೆಯೊಂದಿಗೆ ಪೂಜೆ ಸಲ್ಲಿಸವ ಪ್ರತೀತಿ ಬೆಳೆದು ಬಂದಿದೆ.ಶ್ರೀದೇವಿಯ ವಿಸರ್ಜನಾ ಮಹೋತ್ಸವದಂದು ಗೌರಮ್ಮದೇವಿಯನ್ನು ಪದ್ಮಾಸನದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಭಕ್ತರು ತಮ್ಮ ಹೆಗಲ ಮೇಲೆ ಹೊತ್ತು ವಿವಿಧ ಉತ್ಸವಗಳನ್ನು ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ತಲವು ಅಂದರೆ ಕುರುವು ಕೇಳುವುದು ಬಹುಪ್ರಸಿದ್ಧಿ ಪಡೆದಿದ್ದು, ಶ್ರೀದೇವಿಯೂ ಕುರುವು ಕೊಟ್ಟರೆ ಎಂದು ಸುಳ್ಳು ಆಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.
ಗೌರಮ್ಮದೇವಿಯ ವಿಸರ್ಜನಾ ಮಹೋತ್ಸವದ ಅಂಗವಾಗಿ ಸೆ.27 ರಂದು ಶುಕ್ರವಾರ ಬೆ.೯ಕ್ಕೆ ಗಣಪತಿ ಹೋಮ,ನವಗ್ರಹ ಹೋಮ ,ಚಂಡಿ ಹೋಮ ಏರ್ಪಡಿಸ ಲಾಗಿದೆ ಸೆ.28ರ ಶನಿವಾರ ಗ್ರಾಮದೇವತೆ ಕಲ್ಲುಕೊಡಮ್ಮ ಸಮ್ಮುಖದಲ್ಲಿ ಮಹಲಿಂಗೇಶ್ವರಸ್ವಾಮಿ ಸನ್ನಿದಿಯಲ್ಲಿ ವೀರಭದ್ರೇಶ್ವರ ಸ್ವಾಮಿಯವರ ಗುಗ್ಗುಳ ಮಹೋತ್ಸವ ನಡೆಯಲಿದೆ. ಸೆ.29ರಂದು ಭಾನುವಾರ ಬೆಳ್ಳಗೆ ಸಮಸ್ತ ಭಕ್ತಾದಿಗಳಿಂದ ಸ್ವರ್ಣಗೌರಮ್ಮನವರ ಗುಗ್ಗುಳ ಸೇವೆ ಹಾಗೂ ಮಹಾ ಮಂಗಳಾರತಿ ಆದ ನಂತರ ಗ್ರಾಮದ ಮುಂದಿನ ಕೆರೆಯಲ್ಲಿ ವಿರ್ಸಜಿಸಲಾಗುವುದು, ಪ್ರತಿನಿತ ಭಕ್ತಾಧಿಗಳಿಗಾಗಿ ದಾಸೋಹವನ್ನು ಏರ್ಪಡಿಸಲಾಗಿರುತ್ತದೆ.