2002ರ ಮೇ 16ರಂದು ಆರಂಭಗೊಂಡ ಸಂಸ್ಥೆಯ ವತಿಯಿಂದ ಪ್ರಸ್ತುತ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು, ಮೆಟ್ರಿಕ್ ಪೂರ್ವ ಹಾಗೂ ನಂತರದ ಮಹಿಳಾ ವಸತಿ ನಿಲಯಗಳು ಮತ್ತು ಐಟಿಐ ಕಾಲೇಜನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಗದಗ: ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯು 2027ರ ಮೇ ತಿಂಗಳಲ್ಲಿ 25 ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನೆಲೆ 2026- 27ರ ಶೈಕ್ಷಣಿಕ ವರ್ಷವನ್ನು ರಜತೋತ್ಸವ ವರ್ಷವನ್ನಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಜತ ಮಹೋತ್ಸವ ಸಮಿತಿ ಉಸ್ತುವಾರಿ ಡಾ. ಜಿ.ಬಿ. ಪಾಟೀಲ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2002ರ ಮೇ 16ರಂದು ಆರಂಭಗೊಂಡ ಸಂಸ್ಥೆಯ ವತಿಯಿಂದ ಪ್ರಸ್ತುತ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು, ಮೆಟ್ರಿಕ್ ಪೂರ್ವ ಹಾಗೂ ನಂತರದ ಮಹಿಳಾ ವಸತಿ ನಿಲಯಗಳು ಮತ್ತು ಐಟಿಐ ಕಾಲೇಜನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.

ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಮಾತನಾಡಿ, ಜೂ. 7ರಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳ ಅಮೃತ ಹಸ್ತದಿಂದ ರಜತೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಅಂದು ಸಂಸ್ಥೆಯ ಸಾಧನೆಗಳ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

ನೂತನ ಕಟ್ಟಡದ ಆವರಣದಲ್ಲಿ ಪೂಜ್ಯ ಶ್ರೀಗಳು 25 ಸಸಿಗಳನ್ನು ನೆಡಲಿದ್ದಾರೆ. ಬಳಿಕ ಬಯಲು ಆಂಜನೇಯ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ. ಇದೇ ಸನ್ನಿಧಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಜ್ಯ ವಿದ್ಯುತ್ ನಿಗಮದ ನಿರ್ದೇಶಕ ಹಾಗೂ ಅಭಿಯಂತರರ ಸಂಘದ ಅಧ್ಯಕ್ಷ ಸಿ. ಬಸವಣ್ಣ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಚಂದ್ರಶೇಖರ ನುಗ್ಗಲಿ ಅವರನ್ನು ಶ್ರೀಗಳು ಸನ್ಮಾನಿಸಲಿದ್ದಾರೆ ಎಂದರು.

ರಜತ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ತಿಂಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ನಂತರದ ಮಾಸಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಯುವಕ- ಯುವತಿಯರಿಗಾಗಿ ದೇಶಿ ಕ್ರೀಡಾಕೂಟಗಳ ಉತ್ಸವ ಹಾಗೂ ಮಹಿಳೆಯರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಬಿ. ಭಾವಿಕಟ್ಟಿ, ಫಕೀರಪ್ಪ ಹೆಬಸೂರ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಭಾನಾಪುರ, ಆರ್.ಎಂ. ನಿಂಬನಾಯ್ಕ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.