ಕಂಪ್ಲಿ: ಪಟ್ಟಣದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಕಳ್ಳಭಟ್ಟಿ ಕೇಂದ್ರಗಳ ನಿರ್ಮೂಲನೆ ಕುರಿತು ನಡೆದ ತಾಲೂಕು ಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕಿನ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಶಿಕಾರಿ ಕಾಲನಿಗಳ ಸುತ್ತಮುತ್ತ ಕಳ್ಳಭಟ್ಟಿ ಸರಾಯಿ ತಯಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.ಶಿಕಾರಿ ಕಾಲನಿಗಳ ಸಮೀಪದ ಸ್ಮಶಾನ, ಬಯಲು ಪ್ರದೇಶಗಳು ಹಾಗೂ ಕುರುಚಲು ಗಿಡಗಳು ಹೆಚ್ಚಾಗಿ ಇರುವ ಸ್ಥಳಗಳಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಅವಕಾಶ ಸಿಗುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಸಂಬಂಧಿತ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಅಲ್ಲದೆ, ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿರುವವರ ಅನಧಿಕೃತ ಮನೆಗಳು ಹಾಗೂ ಅಕ್ರಮ ಚಟುವಟಿಕೆಗಳ ವಿವರಗಳನ್ನು ಸಂಗ್ರಹಿಸಿ ಪಟ್ಟಿ ತಯಾರಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕಳ್ಳಭಟ್ಟಿ ಸರಾಯಿ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಅಕ್ರಮ ಮದ್ಯ ಸೇವನೆಯಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರಲ್ಲಿ ಎಚ್ಚರಿಕೆ ಮೂಡಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕೆಂದು ಸಲಹೆ ನೀಡಿದರು.ಕಳ್ಳಭಟ್ಟಿ ತಡೆಗೆ ಸಂಬಂಧಿಸಿದ ದಾಳಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತು ಒದಗಿಸಬೇಕು. ದಾಳಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಮಾತನಾಡಿದ ಅಬಕಾರಿ ನಿರೀಕ್ಷಕಿ ಉಷಾ ಯಂಡಗೇರಿ, 2025ರ ಜುಲೈ ತಿಂಗಳಿಂದ 2026ರ ಏಪ್ರಿಲ್ ತನಕ ಕಳ್ಳಭಟ್ಟಿ ಸರಾಯಿ ತಯಾರಿಕೆಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿ ವೇಳೆ ಒಟ್ಟು 33.77 ಲೀಟರ್ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಳ್ಳಲಾಗಿದ್ದು, ಸುಮಾರು 10 ಲೀಟರ್ ಬೆಲ್ಲದ ಕೊಳೆಯನ್ನು ಸ್ಥಳದಲ್ಲಿಯೇ ನಾಶಪಡಿಸಲಾಗಿದೆ ಎಂದರು.ಸಭೆಯಲ್ಲಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಎಡಿ ಶ್ರೀಶೈಲ ರೂಗಿ, ಅಬ್ಕಾರಿ ಉಪನಿರೀಕ್ಷಕರಾದ ರಾಮಾಂಜನಯ್ಯ ಹಾಗೂ ಕೆ. ನಾಗಮುನಿಸ್ವಾಮಿ, ಎಎಸ್‌ಐ ಪಿ. ಬಸವರಾಜ, ಮುಖ್ಯಶಿಕ್ಷಕ ಎಸ್.ಎಂ. ಸದಾಶಿವ, ಹೊಸಪೇಟೆಯ ಉಪ ವಲಯ ಅರಣ್ಯಾಧಿಕಾರಿ ವೀರೇಶ ಎಚ್. ಮಾಶೆಟ್ಟಿ, ಅರಣ್ಯ ವೀಕ್ಷಕ ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಕಳ್ಳಭಟ್ಟಿ ನಿರ್ಮೂಲನೆಗೆ ಇಲಾಖೆಗಳ ಸಮನ್ವಯ ಅಗತ್ಯ
ತಾಲೂಕಿನ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಶಿಕಾರಿ ಕಾಲನಿಗಳ ಸುತ್ತಮುತ್ತ ಕಳ್ಳಭಟ್ಟಿ ಸರಾಯಿ ತಯಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.