ಕಲ್ಲತ್ತಿಗಿರಿ, ಹೆಬ್ಬೆ ಜಲಾಪತಕ್ಕೂ ನಿರ್ಬಂಧ

| Published : Jul 31 2024, 01:08 AM IST / Updated: Jul 31 2024, 01:09 AM IST

ಸಾರಾಂಶ

ತರೀಕೆರೆ ಸಮೀಪದ ಕಲ್ಲತ್ತಿಗಿರಿ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಜಲಪಾತದ ಗೇಟ್ ಬಂದ್ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ತರೀಕೆರೆ

ತಾಲೂಕಿನ ಬಾವಿಕೆರೆ ಮುರಾರ್ಜಿ ವಸತಿ ಶಾಲೆಯಲ್ಲಿ ಮತ್ತು ಎ.ರಂಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನೆರೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಾಲೂಕು ತಹಸೀಲ್ದಾರ್ ವಿ.ಎಸ್.ರಾಜೀವ್ ಮಾಹಿತಿ ನೀಡಿದ್ದಾರೆ.

ಎ.ರಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ 17 ಜನ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರಾ ಜಲಾಶಯ ಆಣೆಕಟ್ಟಿನ ಗೇಟ್‌ಗಳಿಂದ ನೀರನ್ನು ಹೊರಬಿಟ್ಟ ಸಂದರ್ಭದಲ್ಲಿ ಸೋಂಪುರ ಗ್ರಾಮ ಮತ್ತು ಸುತ್ತಮುತ್ತಲ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲೆಂದು ಭಾವಿಕೆರೆ ಮುರಾರ್ಜಿ ವಸತಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಲ್ಲಿ 200 ಜನರಿಗೆ ಊಟ ವಸತಿಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗಿರಿ ಪ್ರದೇಶದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲ್ಲತ್ತಿಗಿರಿ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಜಲಪಾತದ ಬಳಿ ಜನರು ಪ್ರವೇಶಿಸದಂತೆ ಗೇಟ್ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಲಾಗಿದೆ ಹಾಗೂ ಹೆಬ್ಬೆ ಜಲಪಾತದ ಬಳಿಯೂ ನಿರ್ಬಂಧಿಸಲಾಗಿದೆ. ಭಾನುವಾರ ಬಿಡುವು ನೀಡಿದ್ದ ಮಳೆ ಮತ್ತೆ ಸೋಮವಾರ ಸಾಯಂಕಾಲ ಮತ್ತು ಮಂಗಳವಾರ ಬೆಳಗ್ಗೆಯಿಂದ ಮುಂದುವರಿದಿದ್ದು, ತಾಲೂಕಿನ ಮಲ್ಲಿಗೇನಹಳ್ಳಿ ಪುರದಪ್ಪ, ಗುರುಪುರ ಗ್ರಾಮದ ಕಾಳಿಯಮ್ಮ ಮತ್ತು ನರಸೀಪುರ ಗ್ರಾಮದ ಲಲಿತಮ್ಮ ಎಂಬುವರ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.