ಗದಗ: ನಾನು ಸೇರಿದಂತೆ ಇನ್ನುಳಿದ 6 ಜನರಿಂದ ಜೀವ ಬೆದರಿಕೆ ಇದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಕಲ್ಲಯ್ಯಜ್ಜನವರು ನೀಡಿರುವ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ. 1987ರಿಂದ ಆಶ್ರಮದ ಸೇವೆ ಮಾಡಿಕೊಂಡು ಬಂದಿದ್ದೇನೆ. ಈ ಹೇಳಿಕೆಯ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಯಾರದ್ದೊ ಹೇಳಿಕೆಯಿಂದ ಪ್ರೇರಣೆ ಪಡೆದು ಈ ರೀತಿ ಮಾತನಾಡಿದ್ದಾರೆ ಎಂದು ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟಿ ವಸಂತಗೌಡ ಪೊಲೀಸಪಾಟೀಲ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಯ್ಯಜ್ಜನವರು ಎಂದೂ ಏನನ್ನೂ ಮಾತನಾಡದವರು. ಒಮ್ಮೆಲೇ ಜೀವಬೆದರಿಕೆ ಇದೆ ಎಂದು ಹೇಳಿರುವುದು ಮಾನಸಿಕವಾಗಿ ಬಹಳಷ್ಟು ನೋವುಂಟು ಮಾಡಿದೆ. 40 ವರ್ಷ ಮಠದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಈ ಶಿಕ್ಷೆಯಾ? ಅಂತ ನನ್ನಷ್ಟಕ್ಕೆ ನನಗೆ ಪ್ರಶ್ನೆ ಮೂಡುತ್ತಿದೆ. ನನ್ನ ವಿರುದ್ಧ ಇಂತಹ ಆರೋಪ ಏಕೆ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ನೊಂದು ನುಡಿದರು.

ಹಿಂದು ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಶ್ರೀಮಠದ ಲೆಕ್ಕಪತ್ರದ ವ್ಯವಹಾರದ ಬಗ್ಗೆ ಮಾತನಾಡಿರಲಿಲ್ಲ. ಆದರೆ, ದೇಣಿಗೆ ನೀಡಿದವರಿಗೆ ರಶೀದಿ ನೀಡಿದ್ದೀರಾ? ಅಥವಾ ಟ್ರಸ್ಟಿಗಳ ಜತೆ ಚರ್ಚಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದರಲ್ಲಿ ತಪ್ಪೇನಿದೆ? ಅವರ ಆ ಒಂದು ಹೇಳಿಕೆಯಿಂದ ಇಡೀ ಮಠ ವಿಚಲಿತ ಆಗುವುದಾದರೂ ಏಕೆ? ಎಂದು ಪ್ರಶ್ನಿಸಿದ ಅವರು, ಈ ಕುರಿತು ಮುಂಬರುವ ದಿನಗಳಲ್ಲಿ ನಾಡಿನ ಎಲ್ಲ ಮಠಾಧೀಶರೊಂದಿಗೆ ಚರ್ಚಿಸಿ ಅಗತ್ಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಹಿರಿಯ ಮುಖಂಡ ಚಂದ್ರು ಬಾಳೆಹಳ್ಳಿಮಠ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಲಕ್ಷಾಂತರ ಭಕ್ತರ ದೇಣಿಗೆಯಿಂದ ನಡೆದುಕೊಂಡು ಬಂದಿದೆ. ದಾನಿಗಳು ನೀಡಿದ ದೇಣಿಗೆ ಮೇಲೆ ತಮ್ಮ ಹೆಸರನ್ನು ನೋಂದಾಯಿಸುತ್ತಾರೆ. ಅದೇ ರೀತಿ ರಥದ ಗಾಲಿಯ ಮೇಲೆ ದೇಣಿಗೆ ನೀಡಿದವರು ಹೆಸರು ಬರೆಸಿ ನಾಲ್ಕು ವರ್ಷ ಕಳೆದಿವೆ. ಆದರೆ, ಅದರ ಬಗ್ಗೆ ಆಕ್ಷೇಪ ಈಗ ಯಾಕೆ? ಎದ್ದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೀರೇಶ್ವರ ಪುಣ್ಯಾಶ್ರಮದ ಇನ್ನೋರ್ವ ಟ್ರಸ್ಟಿ ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ, ಪ್ರಕಾಶ ಬಸರಿಗಿಡದ, ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ ಸೇರಿದಂತೆ ಪದಾಧಿಕಾರಿಗಳು ಇದ್ದರು.


ಮಠಾಧೀಶರ ಜತೆ ಚರ್ಚೆ: ಕಲ್ಲಯ್ಯಜ್ಜನವರಿಗೆ 3 ಟ್ರಸ್ಟಿಗಳಿಂದಲೇ ಜೀವಭಯವಿದೆ ಎಂದಿರುವುದು ಸಾಮಾನ್ಯ ವಿಷಯವಲ್ಲ. ಈ ಕುರಿತು ನಾನು ನಾಡಿನ ಎಲ್ಲ ಮಠಾಧೀಶರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸುತ್ತೇನೆ. ಅಗತ್ಯ ಬಿದ್ದರೆ ಆಶ್ರಮದ ಆವರಣದಲ್ಲಿಯೇ ಎಲ್ಲ ಮಠಾಧೀಶರನ್ನು ಸೇರಿಸಿ ನಮ್ಮಿಂದ ಆಗಿರುವ ತಪ್ಪಾದರೂ ಏನು? ಯಾವ ಕಾರಣಕ್ಕಾಗಿ ಹೀಗೆ ನಮ್ಮ ಮೇಲೆ ಆರೋಪ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟಿ ವಸಂತಗೌಡ ಪೊಲೀಸಪಾಟೀಲ ತಿಳಿಸಿದರು.

ಸತ್ಯಕ್ಕೆ ದೂರವಾದ ಆರೋಪ: ಡಾ. ಕಲ್ಲಯ್ಯಜ್ಜನವರು ನನ್ನ ಮೇಲೆ ₹10 ಲಕ್ಷ ಹಣದ ಆರೋಪ ಮಾಡಿದ್ದಾರೆ. ಇದು ಶುದ್ದ ಸುಳ್ಳು. ಕಲ್ಲಯ್ಯಜ್ಜನವರು ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದೆ. ಆ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಹೊರಿಸಿರಬಹುದು. ಪ್ರತಿವರ್ಷ ಲಕ್ಷಾಂತರ ರುಪಾಯಿ ದೇಣಿಗೆಯನ್ನು ವಿವಿಧ ಮಠಗಳಿಗೆ ನೀಡಿದ್ದೇನೆ. ನಾನು ಏಕೆ ಹಣದ ಆಸೆಗೆ ಬೀಳಲಿ, ಇದರ ಹಿಂದೆ ಏನೋ ಅಡಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶಿವರುದ್ರಪ್ಪ ಇಟಗಿ ತಿಳಿಸಿದರು.ವೀರೇಶ್ವರ ಪುಣ್ಯಾಶ್ರಮದ ಸೇವೆಯಲ್ಲಿ ಜಾತಿ, ರಾಜಕೀಯ ಬೇಡ

ಗದಗ: ವೀರೇಶ್ವರ ಪುಣ್ಯಾಶ್ರಮದ ಸೇವೆಯಲ್ಲಿ ಜಾತಿ ಮತ್ತು ರಾಜಕೀಯ ಮಾಡುವುದು ಬೇಡ ಎಂದು ಯುವ ಮುಖಂಡ ರಮೇಶ ಮುಳಗುಂದ ಮನವಿ ಮಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಂದಲೂ ಒಂದು ರುಪಾಯಿ ಸಹ ಪಡೆಯದೇ ಕಳೆದ 11 ವರ್ಷಗಳಿಂದ ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಮದುವೆ ಸೇರಿದಂತೆ ಸೇವಾ ಕಾರ್ಯಗಳ ಸಂಪೂರ್ಣ ವೆಚ್ಚವನ್ನು ಪೀರಸಾಬ್ ಕೌತಾಳ ಅವರು ಭರಿಸುತ್ತಿದ್ದಾರೆ. ಎಲ್ಲರೂ ಒಂದೇ ಎಂಬ ಸಂದೇಶವನ್ನು ಹಿಂದೂ ಧರ್ಮ ಸಾರುತ್ತದೆ. ಆದರೆ ಹಿಂದೂ ಮುಖಂಡ ಎಂದು ಹೇಳಿಕೊಂಡು ರಾಜು ಖಾನಪ್ಪನವರ ಅವರು ಮಠದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದರು.ವಿನೋದ ಸಿದ್ಲಿಂಗ ಮಾತನಾಡಿ, ಪುಟ್ಟರಾಜ ಅಜ್ಜನವರ ಜಯಂತಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಮಾಜದ ಸಾಮರಸ್ಯ ಕಾಪಾಡುವ ಕೆಲಸ ಮಾಡಿದ್ದೇವೆ. ಅದನ್ನು ಹೊರತುಪಡಿಸಿ ಮಠಕ್ಕೆ ಧಕ್ಕೆ ತರುವಂತ ಕೆಲಸ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಚಂದ್ರು ಕಡಕೋಳ, ಅನಿಲ್ ಶಿಂಗಟಾನಕೇರಿ, ಹಣಮಂತಪ್ಪ ಆಸಂಗಿ, ದಾವಲ, ಅಜರುದ್ದೀನ್ ಮೂಲಿಮನಿ, ರಜಾಕ್ ಸೌದಿ ಇದ್ದರು.