ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಲ್ಮಂಜ ಗ್ರಾಮ ಪಂಚಾಯಿತಿ ಗ್ರಾಮಸಭೆ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಮಲಾ ಅಧ್ಯಕ್ಷತೆಯಲ್ಲಿ ನಡೆಯಿತು.ಕಲ್ಮಂಜ ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಶಾಲಾ ಮಕ್ಕಳು ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಅಗತ್ಯ ಸ್ಥಳಗಳನ್ನು ಗುರುತಿಸಿ ಆನೆ ಕಂದಕ ನಿರ್ಮಿಸಬೇಕೆಂದು ಗ್ರಾಮಸ್ಥ ರಾಘವ ಆಗ್ರಹಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಉತ್ತರಿಸಿ, ಕಲ್ಮಂಜ ಗ್ರಾಮ ವ್ಯಾಪ್ತಿಯಲ್ಲಿ 3.5 ಕಿ.ಮೀ. ಆನೆ ಕಂದಕ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 1.5 ಕಿ.ಮೀ. ವ್ಯಾಪ್ತಿಗೆ ಕಂದಕ್ಕೆ ನಿರ್ಮಿಸಲು ಅನುದಾನ ಮಂಜೂರಾಗಿದ್ದು, ನೇರ್ತನೆಯಿಂದ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.ಗ್ರಾಮದಲ್ಲಿ ಅಪಾಯಕಾರಿ ಮರಗಳಿದ್ದು, ಇವುಗಳಿಂದ ವಿದ್ಯುತ್ ಲೈನ್ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಮಳೆಗಾಲದ ಮೊದಲು ಇವುಗಳನ್ನು ತೆರೆವುಗೊಳಿಸಬೇಕು ಎಂದು ಗ್ರಾಮಸ್ಥ ದಿನೇಶ್ ಸಭೆಯ ಗಮನಕ್ಕೆ ತಂದರು.
ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಈ ಬಗ್ಗೆ ಪರಿಶೀಲಿನ ನಡೆಸಿ ಕ್ರಮ ಕೈಗೊಳ್ಳುವ ಕುರಿತು ನಿರ್ಣಯಿಸಲಾಯಿತು.ಕಲ್ಮಂಜ ಗ್ರಾಮ ವ್ಯಾಪ್ತಿ ಹೊಂದಿರುವ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಸಹಿತ ಸಿಬ್ಬಂದಿ ಕೊರತೆ ಇರುವುದರಿಂದ ಜನರಿಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ವಿಚಾರವನ್ನು ರಾಘವೇಂದ್ರ ಪ್ರಸ್ತಾಪಿಸಿದರು.
ಮುಂದಿನ ತಿಂಗಳಲ್ಲಿ ಹೊಸ ವೈದ್ಯಾಧಿಕಾರಿ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.ನಿಡಿಗಲ್ ಮಜಲು ಎಂಬಲ್ಲಿ ಜಲಾನಯನ ಇಲಾಖೆ ವತಿಯಿಂದ ಅನೇಕ ವರ್ಷಗಳ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟು ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಇಲ್ಲಿ ಮರಮಟ್ಟು ಹಾಗೂ ತ್ಯಾಜ್ಯ ಸಂಗ್ರಹಗೊಂಡು ನೀರು, ಸಮೀಪದ ಕೃಷಿಕರ ಗದ್ದೆ ತೋಟಗಳಿಗೆ ನುಗ್ಗಿ ಕೃಷಿಹಾನಿ ಉಂಟಾಗುತ್ತಿದೆ. ಈ ಕಿಂಡಿ ಅಣೆಕಟ್ಟಿನ ಉಳಿದಿರುವ ಭಾಗಗಳನ್ನು ತೆರವುಗೊಳಿಸುವಂತೆ ವಿಜಯಕುಮಾರ್ ಆಗ್ರಹಿಸಿದರು.
ಬೇಸಿಗೆಯಲ್ಲಿ ನದಿ ನೀರಿನಲ್ಲಿ ಸ್ಫೋಟಕಗಳನ್ನು ಸಿಡಿಸಿ ಮೀನು ಹಿಡಿಯುವುದರಿಂದ ನೀರು ಮಲೀನವಾಗುವ ಜತೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸಚಿನ್ ಸೂಚಿಸಿದರು.ಗ್ರಾಮದ ರಸ್ತೆಗಳನ್ನು ದುರಸ್ತಿಗೊಳಿಸುವ ಕುರಿತು ಚರ್ಚೆ ನಡೆಯಿತು.
ಪಶು ಸಂಗೋಪನೆ ಇಲಾಖೆಯ ಡಾ.ವಿಶ್ವನಾಥ ಸಿ. ನೋಡಲ್ ಅಧಿಕಾರಿಯಾಗಿದ್ದರು. ಪಿಡಿಒ ಗೀತಾ ಸಾಲಿಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಸರೋಜಿನಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಪೂರ್ಣಿಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.