ಯುವ ಜನರಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಕಲೋತ್ಸವ ಒಂದು ಒಳ್ಳೆಯ ವೇದಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಯುವ ಜನರಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಕಲೋತ್ಸವ ಒಂದು ಒಳ್ಳೆಯ ವೇದಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ಹೇಳಿದರು. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ -2025 ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಕರೋನ ಮತ್ತಿತರರ ಕಾರಣಗಳಿಂದ ಕೆಲ ವರ್ಷಗಳಿಂದ ಈ ಯೋಜನೆ ಸ್ಥಗಿತವಾಗಿತ್ತು. ಈ ಬಾರಿ ಇಲಾಖೆಯ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿಗಳ ಒತ್ತಾಸೆಯ ಮೇರಗೆ ಕಲೋತ್ಸವ ಮತ್ತೊಮ್ಮೆ ಯುವಜನರಿಗೆ ವೇದಿಕೆ ಒದಗಿಸಲು ಸಿದ್ದವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿಯೇ ಕಲೋತ್ಸವ ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ. ಕಲೋತ್ಸವದ ಮೂಲಕ ನಾಡಿಗೆ ಅನೇಕ ಹೊಸ ಕಲಾವಿದರು ಪರಿಚಯವಾಗಿ, ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡು, ಸಾಧನೆಯತ್ತ ಮುನ್ನೆಡೆದಿದ್ದಾರೆ ಎಂದರು. ಕಲೋತ್ಸವ ಜಿಲ್ಲೆ,ವಿಭಾಗೀಯ, ರಾಜ್ಯ ಮಟ್ಟದ ಮೂರು ಹಂತದ ಸ್ಪರ್ಧೆಗಳು ನಡೆಯುತ್ತವೆ. ತುಮಕೂರು ಜಿಲ್ಲೆ ಕಲಾವಿದರ ತವರೂರು, ಇಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಯುವಕಲಾವಿದರು ಕೀಳಿರಿಮೆ ಬಿಟ್ಟು, ತಮ್ಮ ಕಲೆಯನ್ನು ಎಲ್ಲರ ಮುಂದೆ ಆನಾವರಣಗೊಳಿಸುವ ಮೂಲಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತರಬೇಕೆಂದು ಸಲಹೆ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಪ್ರ ತಿಭೆಗೆ ಒಂದು ವೇದಿಕೆ ಸಿಕ್ಕಾಗ ಅದು ಕಲೆಯಾಗಿ ರೂಪಗೊಳ್ಳುತ್ತದೆ. ಅದರನ್ನು ನಿರಂತರವಾಗಿ ಅಭ್ಯಾಸ ಮಾಡಿದಾಗ ಅದು ಆಸ್ತಿಯಾಗಿ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ. ಯುವಜನರಲ್ಲಿ ಇರುವ ಕಲೆಯ ಅನಾವರಣಕ್ಕೆ ಇಲಾಖೆ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇದನ್ನು ಬಳಸಿಕೊಂಡು ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರದರ್ಶಿಸಿ,ಆ ಮೂಲಕ ಖ್ಯಾತರಾಗುವಂತೆ ಸಲಹೆ ನೀಡಿದರು.ಚಿತ್ರ ಕಲಾವಿದ ಮನು ಚಕ್ರವರ್ತಿ ಮಾತನಾಡಿ, ಇದು ಕಲೆಯ ಉತ್ಸವ. ಕಲೆ ನಮ್ಮಗಳನ್ನು ಶ್ರೀಮಂತರನ್ನಾಗಿ ಮಾಡುವುದರ ಜೊತೆಗೆ,ನಾಡನ್ನು ಶ್ರೀಮಂತವಾಗಿಸುತ್ತದೆ. ಚಿತ್ರಕಲೆ ಎಂದರೆ ನಿಮ್ಮೊಳ್ಳಗಿನ ಕಲೆಗೆ ಬಣ್ಣ ಹಚ್ಚಬೇಕು. ಯಾವುದೇ ಅಭಿವ್ಯಕ್ತಿ ಉಳಿಯ ಬೇಕಾದರೆ ನಮ್ಮ ಸ್ವಂತ ಕಲ್ಪನೆಗೆ ಜೀವ ತುಂಬುವ ಕೆಲಸ ಮಾಡಿ, ಇದು ತೀರ್ಪುಗಾರಿಗೂ ಒಳ್ಳೆಯ ತೀರ್ಪು ನೀಡಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಡಾ.ರವಿಕುಮಾರ್ ನೀ.ಹ. ಮಾತನಾಡಿ, ನಮ್ಮ ಸಮಾಜ ಇಂದು ಆರೋಗ್ಯಕರವಾಗಿವೆ ಎಂದರೆ, ಅದಕ್ಕೆ ಕಾರಣ ನಮ್ಮ ನೆಲದಲ್ಲಿರುವ ಕಲೆ, ಸಾಹಿತ್ಯ, ನಾಟಕ, ಸುಗಮ ಸಂಗೀತದಂತಹ ಲಲಿತ ಕಲೆಗಳೇ ಕಾರಣ. ಒಂದು ವೇಳೆ ಇವುಗಳು ಇಲ್ಲದಿದ್ದರೆ ದೇಶದ ಭ್ರಷ್ಟಾಚಾರದಿಂದ ತುಂಬಿ ತುಳುಕುತಿತ್ತು ಎಂಬ ಅನುಮಾನ ನಮ್ಮನ್ನು ಕಾಡುತ್ತದೆ.ಕಲೆಗಳು ಯಾಂತ್ರಿಕವಾಗುತ್ತಿರುವ ಕಾಲದಲ್ಲಿ, ಪೋಷಕರು ಕಲೆಯ ಕಡೆಗೆ ಗಮಹರಿಸುತ್ತಿರುವುದು ಸಂತೋಷದ ವಿಚಾರವಾಗಿದೆ.ಕಲೆ ಮನುಷ್ಯಪರವಾದ ಜೀವಪರವಾದ ನಿಲುವು ಹೊಂದಿದೆ. ಹಾಗಾಗಿಯೇ ಇಲಾಖೆಯ ಇಂತಹ ಜೀವಪರ ವೇದಿಕೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಯುವಜನರ ಕಲೆಗೆ ಪ್ರೋತ್ಸಾಹ ಸಿಕ್ಕಾಗ, ಅದು ಉತ್ಸವವಾಗಿ ರೂಪಗೊಳ್ಳುತ್ತದೆ.ಇಂದಿನ ಸ್ಪರ್ಧೆಗೆ ಬಂದಿರುವ ಯುವಜನರು ಒಳ್ಳೆಯ ಪ್ರದರ್ಶನ ನೀಡಿ, ಜಿಲ್ಲೆಗೆ ಗೌರವ ತರಬೇಕೆಂದು ಸಲಹೆ ನೀಡಿದರು. ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಯಾವುದೇ ಕಲಾ ಪ್ರಕಾರ ತೆಗೆದುಕೊಂಡರೂ ತುಮಕೂರು ಜಿಲ್ಲೆ ದೊಡ್ಡ ಹೆಸರು ಮಾಡಿದೆ. ಅದೇ ರೀತಿ ಇಂದು ಸ್ಪರ್ಧೆಗೆ ಬಂದಿರುವ ಯುವಜನರು, ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಗೆ ಹೆಸರು ತರಬೇಕೆಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ, ಮೇಲ್ವಿಚಾರಕರಾದ ಸುರೇಶಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಐದು ಸಮಾನಂತರ ವೇದಿಕೆಗಳಲ್ಲಿ ನಡೆದ ಕಲೋತ್ಸವದಲ್ಲಿ ಯುವಜನರು ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಿದರು.