ಸಾರಾಂಶ
ಏಶ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಯುವತಿ ಎರಡು ಕಂಚಿನ ಪದಕ ಗಳಿಸಿದ್ದಾಳೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ದಕ್ಷಿಣ ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಜಿಲ್ಲೆಯ ಯುವತಿ ಎರಡು ಕಂಚಿನ ಪದಕ ಗಳಿಸಿದ್ದಾಳೆ.ಕುಶಾಲನಗರ ಮಾದಾಪಟ್ಟಣ ಗ್ರಾಮದ ಕುಮಾರಿ ಮುಕ್ಕಾಟಿರ ಕಲ್ಪನಾ ಕುಟ್ಟಪ್ಪ ಈ ಸಾಧಕಿಯಾಗಿದ್ದಾಳೆ. ದಕ್ಷಿಣ ಕೊರಿಯಾದ ಜೆಟಿಯಾನ್ ನಗರದಲ್ಲಿ ಜು. 19 ರಿಂದ 10 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಭಾರತದ ಒಟ್ಟು 23 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು ಕಲ್ಪನಾ ಕುಟ್ಟಪ್ಪ ಅವರು ಎರಡು ಕಂಚಿನ ಪದಕಗಳನ್ನು ಗಳಿಸುವುದರೊಂದಿಗೆ ಭಾರತಕ್ಕೆ ಒಟ್ಟು 16 ಪದಕಗಳು ಲಭ್ಯವಾಗಿವೆ ಎಂದು ತಂಡದ ಕೋಚ್ ಶ್ರೀಪಾದ್ ಶಿಂಧೆ ತಿಳಿಸಿದ್ದಾರೆ.
ಕಲ್ಪನಾ ಕುಟ್ಟಪ್ಪ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ 20ಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದು 2023ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಒಂದು ಕಂಚಿನ ಪದಕ ಗಳಿಸಿದ್ದರು. ಮೂಲತಹ ಕುಶಾಲನಗರ ಸಮೀಪದ ಮಾದಪಟ್ಟಣ ಗ್ರಾಮದ ಖ್ಯಾತ ನಾಟಿ ವೈದ್ಯರಾಗಿರುವ ಅಯಿನಮಂಡ ಲೀಲಾವತಿ ಗಣಪತಿ ಅವರ ಮೊಮ್ಮಗಳು ಮುಕ್ಕಾಟಿರ ಸ್ವಾತಿ ರವಿ ಕುಟ್ಟಪ್ಪ ದಂಪತಿಗಳ ಪುತ್ರಿಯಾದ ಕಲ್ಪನಾ ಕುಟ್ಟಪ್ಪ ಪ್ರಸಕ್ತ ಚೆನ್ನೈ ಡಬ್ಲ್ಯೂ ಸಿ ಸಿ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.ಕಲ್ಪನಾ ಕುಟ್ಟಪ್ಪ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಚೀನಾ ದೇಶದಲ್ಲಿ ನಡೆಯುವ ವಿಶ್ವ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿದ್ದಾರೆ.