ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು, ಅದರಂತೆ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 28 ರಂದು ಗೆಜೆಟ್ ಅಧಿಸೂಚನೆ ಹೊರಡಿಸುವಿಕೆ, ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಏಪ್ರಿಲ್ 5 ನಾಮಪತ್ರ ಪರಿಶೀಲನೆ, ಏಪ್ರಿಲ್ 8 ನಾಮಪತ್ರ ಹಿಂತೆಗೆಯುವಿಕೆ, ಮತದಾನ ಏಪ್ರಿಲ್ 26, ಮತ ಎಣಿಕೆ ಜೂನ್ 4, ಜೂನ್ 6, ಚುನಾವಣೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗಾಗಿ ಅಂತಾರಾಜ್ಯ ಗಡಿ 12, ಅಂತರ ಜಿಲ್ಲಾ ಗಡಿ 16 ಮತ್ತು ಜಿಲ್ಲೆಯೊಳಗೆ 16 ಸೇರಿದಂತೆ ಒಟ್ಟು 44 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, 50 ಸಾವಿರಕ್ಕೂ ಹೆಚ್ಚು ನಗದು ಮತ್ತು 10ಸಾವಿರ ರು. ಮೇಲ್ಪಟ್ಟ ವಸ್ತುಗಳನ್ನು ಸಾಗಾಟ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.11 ವಿಧಾನಸಭಾ ಕ್ಷೇತ್ರಗಳಿಗೂ ಸಹ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಚುನಾವಣಾ ಕೆಲಸಗಳಿಗಾಗಿ ಕಾನೂನು ಸುವ್ಯವಸ್ಥೆ, ಎಂಸಿಸಿ, ಮಾನವ ಸಂಪನ್ಮೂಲ ನಿರ್ವಹಣೆ, ತರಬೇತಿ, ಸಾರಿಗೆ, ಸೈಬರ್ ಸೆಕ್ಯೂರಿಟಿ ಐಟಿ ಸೇರಿ ಎಲ್ಲಾ ವಲಯಗಳ ಚುನಾವಣಾ ಕೆಲಸಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರಗಳು:ಚಿ.ನಾ.ಹಳ್ಳಿ ಸರ್ಕಾರಿ ಪಿಯು ಕಾಲೇಜು, ತಿಪಟೂರು ಸರ್ಕಾರಿ ಬಾಲಕರ ಪಿಯು ಕಾಲೇಜು, ತುರುವೇಕೆರೆ ಸರ್ಕಾರಿ ಜ್ಯೂನಿಯರ್ ಕಾಲೇಜು, ಮಧುಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು ಸರ್ಕಾರಿ ಪಿಯು ಕಾಲೇಜು, ತುಮಕೂರು ಸರ್ವೋದಯ ಹೈಸ್ಕೂಲ್, ಕೊರಟಗೆರೆ ಸರ್ಕಾರಿ ಪಿಯು ಕಾಲೇಜು, ಗುಬ್ಬಿ ಪ್ರಥಮ ದರ್ಜೆ ಕಾಲೇಜು, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡ ಸರ್ಕಾರಿ ಪಿಯು ಕಾಲೇಜು ಮತ್ತು ಕುಣಿಗಲ್ ಸರ್ಕಾರಿ ಪಿಯು ಕಾಲೇಜುಗಳನ್ನು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನಾಗಿ ಗುರುತಿಸಲಾಗಿದ್ದು, ಮತ ಎಣಿಕೆಯು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದೆ. ಶಿರಾ, ಪಾವಗಡ ಮತ ಎಣಿಕೆ ಚಿತ್ರದುರ್ಗದಲ್ಲಿ ಮತ್ತು ಕುಣಿಗಲ್ ಮತ ಎಣಿಕೆ ರಾಮನಗರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಜಿ. ಪ್ರಭು ಮಾತನಾಡಿ, ಸ್ವೀಪ್ ಚಟುವಟಿಕೆಯಡಿ ಈ ಬಾರಿ ಶೇ.೬೫ಕ್ಕಿಂತ ಕಡಿಮೆಯಾಗಿರುವಂತಹ ಮತಗಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಪ್ರತಿ ಮತಗಟ್ಟೆವಾರು ಸ್ವೀಪ್ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. ಈ ಬಾರಿ ೧೦-೧೫ ವಿಶೇಷ ಥೀಮ್‌ಗಳ ಮೂಲಕ ೨೦೦-೩೦೦ ಮತಗಟ್ಟೆಗಳನ್ನು ಅತ್ಯಾಕರ್ಷಕ ಮತಗಟ್ಟೆಗಳನ್ನಾಗಿ ಮಾಡಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರ್ದಿಷ್ಟ ಇವಿಎಂಗಳನ್ನು ತರಬೇತಿಗೆಂದೇ ಬಳಕೆ ಮಾಡಲಾಗುವುದು, ಪ್ರತಿ ತಾಲೂಕಿಗೆ ೪-೫ ಚುನಾವಣಾ ರಾಯಭಾರಿಗಳನ್ನು ಗುರುತಿಸಿ, ಮತದಾನದ ಮಹತ್ವ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಈ ಬಾರಿ ೪೪,೪೨೯ ಯುವ ಮತದಾರರು ನೋಂದಣಿಯಾಗಿದ್ದು, ಅವರು ಮತಗಟ್ಟೆಗೆ ಬಂದು ತಪ್ಪದೆ ಮತದಾನ ಮಾಡುವಂತೆ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.ಎಸ್ಪಿ ಅಶೋಕ್ ಕೆ.ವಿ. ಮಾತನಾಡಿ, ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರವಾರು ಪೊಲೀಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಪಿಎಫ್ ತುಗಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರುಕಲ್ಪತರು ಜಿಲ್ಲೆಯಲ್ಲಿ 22 ಲಕ್ಷಕ್ಕೂ ಹೆಚ್ಚಿನ ಮತದಾರರು: ಜಿಲ್ಲೆಯಲ್ಲಿ ಒಟ್ಟು 22,77,996 ಮತದಾರರಿದ್ದು, ಈ ಪೈಕಿ ೧೧,೪೭,೯೫೭ ಮಹಿಳಾ ಮತದಾರರು, ೧೧,೨೯,೯೪೭ ಪುರುಷ ಮತದಾರರಿದ್ದು, ೪೪೪೨೯ ಯುವ ಮತದಾರರಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ೨೬೧೮ ಮತಗಟ್ಟೆಗಳಿದ್ದು, ಈ ಪೈಕಿ ೪೧೪ ಕ್ರಿಟಿಕಲ್ ಮತಗಟ್ಟೆಗಳು, ೫೫ ಮಹಿಳಾ ಮತಗಟ್ಟೆಗಳು, ೧೧ ವಿಕಲಚೇತನ ಮತಗಟ್ಟೆಗಳು ಮತ್ತು ೨೨ ಯುವ ಅಧಿಕಾರಿಗಳ ಮತಗಟ್ಟೆಗಳಿರುತ್ತವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ-ವಿಜಿಲ್ ಆಪ್‌ಅನ್ನು ಉಪಯೋಗಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಮತ್ತು ೧೯೫೦ ವೋಟರ್ ಹೆಲ್ಪ್‌ಲೈನ್ ಟೋಲ್ ಫ್ರೀ ನಂಬರ್ ಮೂಲಕವೂ ಚುನಾವಣೆಗೆ ಸಂಬಂಧಿಸಿದಂತೆ ದೂರು ದಾಖಲಿಸಬಹುದು. ಪ್ರತಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಅಂಗವಿಕಲರು ಮತ್ತು ೮೫ ವರ್ಷ ಮೇಲ್ಪಟ್ಟ ವೃದ್ಧರು ನಮೂನೆ-೧೨ಡಿ ಸಲ್ಲಿಸುವ ಮೂಲಕ ಮತದಾನ ಮಾಡಬಹುದಾಗಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಬೇಕಿದ್ದಲ್ಲಿ ಸುವಿಧ ತಂತ್ರಾಂಶದ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.