ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜ್‌: ಮಾದಕ ವಸ್ತು ಜಾಗೃತಿ ಕಾರ್ಯಕ್ರಮ

| Published : Aug 20 2025, 02:00 AM IST

ಸಾರಾಂಶ

ಕಲ್ಯಾಣಪುರ ಮಿಲಾಗ್ರಿಸ್ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಇಲ್ಲಿನ ಮಿಲಾಗ್ರಿಸ್ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಲ್ಪೆ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ಅನಾಹುತಗಳು, ಯುವಜನರ ಮೇಲೆ ಬೀರುವ ದುಷ್ಪರಿಣಾಮಗಳು ಮತ್ತು ಆರೋಗ್ಯಕರ ಜೀವನಶೈಲಿಯ ಅಗತ್ಯತೆಗಳ ಕುರಿತು ಉಪನ್ಯಾಸ ನೀಡಿದರು.

ಯುವ ಜನರು ಮಾದಕ ವಸ್ತುಗಳ ದಾಸರಾಗದೆ ತಮ್ಮ ಗುರಿಯನ್ನು ಸಾಧಿಸುವತ್ತ ಚಿತ್ತ ಹರಿಸಬೇಕೆಂದು ವಿವರಿಸಿದ ಅವರು, ಮಾದಕ ವಸ್ತು ಸೇವನೆ ಮತ್ತು ಅದರ ವಹಿವಾಟಿಗೆ ಸಂಬಂಧಿಸಿದ ಕಾನೂನು ಶಿಕ್ಷೆಗಳು ಹಾಗೂ ಕಠಿಣ ದಂಡನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು. ನೈಜ ಜೀವನದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರಲು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾ ಡಾ ವಿನ್ಸೆಂಟ್ ಆಳ್ವ ಇವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ, ಶಿಕ್ಷಣ ಸಂಸ್ಥೆಗಳು ಯುವ ಜನರ ಜೀವನದಲ್ಲಿ ಮೌಲ್ಯಾಧಾರಿತ ಚಿಂತನೆ ಹಾಗೂ ಶಿಸ್ತಿನ ಜೀವನ ಶೈಲಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಇಂತಹ ಜಾಗೃತಿ ಕಾರ್‍ಯಕ್ರಮಗಳು ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳಲು ದಾರಿದೀಪವಾಗುತ್ತದೆ, ಮಾದಕ ವಸ್ತು ರಹಿತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಿಚರ್ಡ ಜೀವನ್ ಮೋರಸ್, ಪದವಿ ಕಾಲೇಜಿನ ಉಪಪ್ರಾಂಶುಪಾಲ ಸೋಫಿಯಾ ಡಯಾಸ್, ಪದವಿಪೂರ್ವ ಕಾಲೇಜಿನ ಮಾದಕ ವಸ್ತು ಜಾಗೃತಿ ಸಮಿತಿಯ ಸಂಯೋಜಕಿ ರೀನಾ ಫೆರ್ನಾಂಡಿಸ್, ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ರವಿನಂದನ್ ಭಟ್ ನಿರೂಪಿಸಿದರು.