ಸಾರಾಂಶ
ಚಿಕ್ಕಮಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಲೋಕಸಭಾ ಮಾದರಿಯ ಮೈತ್ರಿಕೂಟದ ತಂತ್ರಗಾರಿಕೆ ಅಳವಡಿಸಿಕೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಆಧಾರವಾಗುತ್ತಿತ್ತು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದ ಬಿಜೆಪಿ ಹೋಬಳಿ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಬೆಲೆ ಏರಿಕೆ ತಾಪಮಾನದಿಂದ ಇಂದು ಜನತೆ ಕಂಗಾಲಾಗಿದ್ದಾರೆ. ಒಂದೆಡೆ ಪ್ರತಿಯೊಂದು ವಸ್ತುವಿನ ದರವನ್ನು ಏರಿಸಲಾಗಿದೆ. ಇನ್ನೊಂದೆಡೆ ಉಚಿತವಾಗಿ ನೀಡುತ್ತಿರುವುದರಿಂದ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲದಂತಾಗಿದೆ. ಮನಬಂದಂತೆ ಬೆಲೆ ಏರಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ ಮತದಾರರು ದೇಶ ಗಟ್ಟಿತನದಿಂದ ಕೂಡಿರಬೇಕು. ಸ್ವಾಭಿಮಾನ ಸಂಕೇತದಿಂದ ಜೀವಿಸಬೇಕು ಎಂಬ ದೃಷ್ಟಿಯಿಂದ ಲೋಕಸಭಾ ಸದಸ್ಯನಾಗಿ ತಮ್ಮನ್ನು ಆಯ್ಕೆಗೊಳಿಸಿದೆ. ಆದರೆ, ಎಐಸಿಸಿ ಅಧ್ಯಕ್ಷ ಹಿಂದೂಗಳ ಪವಿತ್ರ ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಹೊಟ್ಟೆ ತುಂಬುವುದೇ ಎಂಬ ಅವಹೇಳನಕಾರಿ ಹೇಳಿಕೆ ನೀಡಿ ಹಿಂದೂ ಸಮಾಜಕ್ಕೆ ಘಾಸಿ ಉಂಟು ಮಾಡುವುದು ಸರಿಯಲ್ಲ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಂದು ಜನಾಂಗಕ್ಕೂ ಯೋಜನೆಗಳನ್ನು ರೂಪಿಸಿ ಸ್ಪಂದಿಸುತ್ತಿದೆ. ಅಲ್ಲದೇ ಈ ಹಿಂದೆ 5 ಲಕ್ಷವಿದ್ಧ ಆದಾಯ ತೆರಿಗೆಯನ್ನು ಪ್ರಸ್ತುತ ಬಜೆಟ್‌ನಲ್ಲಿ 12 ಲಕ್ಷಕ್ಕೆ ಯಾವುದೇ ತೆರಿಗೆ ವಿಧಿಸದಂತೆ ಕ್ರಮ ಕೈಗೊಂಡಿದೆ. ಅಲ್ಲದೇ 36 ವಿವಿಧ ಔಷಧಿಗಳಲ್ಲಿ ತೆರಿಗೆ ವಿನಾಯಿತಿ ನೀಡಿ ಬಡವರ ಆಶಾ ದೀಪವಾಗಿದೆ ಎಂದು ಹೇಳಿದರು.
ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಜು ಮಣೇನಹಳ್ಳಿ ಮಾತನಾಡಿ, ಮೂಡಿಗೆರೆ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಅಂಬಳೆ ಅತ್ಯಂತ ಹಿಂದುಳಿದ ಹೋಬಳಿಯಾಗಿದೆ. ಕೆಲವೆಡೆ ಅರ್ಧಂಬರ್ಧ ಕಾಮಗಾರಿ ಪ್ರಗತಿಯಲ್ಲಿವೆ. ಹಿಂದಿನ ಬಿಜೆಪಿ ಶಾಸಕರ ಕಾಲದ ಅಭಿವೃದ್ಧಿಗಳನ್ನೇ ಹಾಲಿ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದುಳಿದ ಹಾಗೂ ಗಡಿ ಪ್ರದೇಶದಲ್ಲಿರುವ ಹೋಬಳಿಗೆ ಸಮಗ್ರ ಅನುದಾನದ ಕೊರತೆಯಿದೆ. ಹೀಗಾಗಿ ಸಂಸದರ ನಿಧಿಯಿಂದ ಗ್ರಾಮಕ್ಕೆ ಸಮುದಾಯ ಭವನ, ಅಡುಗೆ ಮನೆ, ಶೌಚಾಲಯಕ್ಕೆ ಅನುದಾನ ಒದಗಿಸಿ ಕೊಡಬೇಕು. ಜೊತೆಗೆ ಅಂಬಳೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಗುಂಡಿ ಬಿದ್ದಿರುವ ಕಾರಣ ದುರಸ್ತಿಗೂ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಪ್ರಧಾ ನ ಕಾರ್ಯದರ್ಶಿ ದಿನೇಶ್ ಪಾದಮನೆ, ಅಂಬಳೆ ಹೋಬಳಿ ಅಧ್ಯಕ್ಷ ಯೋಗೀಶ್, ಜಿ.ಪಂ. ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್, ಮಂಡಲ ಅಧ್ಯಕ್ಷ ಕೃಷ್ಣ, ಅಂಬಳೆ ಹೋಬಳಿ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ದೀಪಕ್ ದೊಡ್ಡಯ್ಯ, ರಮೇಶ್, ಧರ್ಮೇಗೌಡ, ಮಂಜೇಗೌಡ, ತಮ್ಮೇಗೌಡ, ಮಾಸ್ತೇಗೌಡ, ಬಲರಾಮ್, ಜಗನ್ನಾಥ್, ಪ್ರಸನ್ನ ಇದ್ದರು.