ಕಮರಿತು ಸೈನಿಕನಾಗುವ ಕನಸು!

| Published : Jan 05 2025, 01:31 AM IST

ಸಾರಾಂಶ

ಚಿಕ್ಕಂದಿನಿಂದಲೂ ಸಂಜಯನಿಗೆ ಸೈನ್ಯ ಸೇರುವ ಕನಸಿತ್ತು. ಈ ಕುರಿತು ತಮ್ಮ ತಂದೆ-ತಾಯಿ, ದೊಡ್ಡಪ್ಪ ರಾಜಶೇಖರ ಅವರ ಬಳಿಯೂ ಹೇಳಿಕೊಂಡಿದ್ದ. ಕುಟುಂಬಸ್ಥರೂ ಸಹ ಇವನ ಆಸೆಗೆ ಬೆನ್ನುಲುಬಾಗಿ ನಿಂತಿದ್ದರು. ಮಗನ ಆಸೆ ಕಂಡು ತಂದೆ ಹಾಗೂ ದೊಡ್ಡಪ್ಪ ಇಬ್ಬರೂ ಸೇರಿ ಕಳೆದ 6 ತಿಂಗಳಿನಿಂದ ಸೂಕ್ತ ತರಬೇತಿ ನೀಡುತ್ತಿದ್ದರು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನನ್ನ ಮಗ ಸೈನ್ಯ ಸೇರಬೇಕು ಅನ್ನೊ ಕನಸು ಕಂಡಿದ್ದಾ, ಆದ್ರ ಆ ದೇವ್ರು ನಮ್ಮ ಬಾಳಲ್ಲಿ ಆಟವಾಡಿ ಅವನನ್ನ ತನ್ನತ್ರ ಕರೆದುಕೊಂಡು ಬಿಡ್ತು. ಬಾಳಿ ಬದುಕಿ, ಕುಟುಂಬಕ್ಕೆ ಬೆನ್ನಲುಬು ಆಗಬೇಕಾದ ಮಗನನ್ನ ಕಳಕೊಂಡೀನಿ. ನನ್ನ ಈ ಪಾಡು ಯಾವ ತಾಯಿಗೂ ಬರಬಾಡ್ದು...ಈಚೆಗೆ ಇಲ್ಲಿನ ಸಾಯಿ ನಗರದ ಅಚ್ಚವ್ವನ ಕಾಲನಿಯಲ್ಲಿ ಸಿಲಿಂಡರ್‌ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡು ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ಸಂಜಯ್ ಸವದತ್ತಿ (17) ತಾಯಿಯ ನೋವಿನ ನುಡಿಗಳು. ಈ ಅವಘಡದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ 8 ಜನ ಮೃತಪಟ್ಟಿದ್ದರು. ಇವರಲ್ಲಿ ಸಂಜಯ್‌ ಸವದತ್ತಿ ಕೂಡ ಒಬ್ಬ. ಮೃತ ಸಂಜಯ ತಂದೆ ಪ್ರಕಾಶ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಸಂಜಯನನ್ನು ಕಳೆದುಕೊಂಡಿದ್ದು, 13 ವರ್ಷದ ಪುತ್ರಿ ಇದ್ದಾಳೆ.ಸೈನ್ಯ ಸೇರುವ ಕನಸು ಕಂಡಿದ್ದ:

ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂಜಯ್‌ 9 ಮತ್ತು 10ನೇ ತರಗತಿಯನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕಲಿತಿದ್ದನು. ನಗರದಲ್ಲಿಯೇ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.

ಚಿಕ್ಕಂದಿನಿಂದಲೂ ಸಂಜಯನಿಗೆ ಸೈನ್ಯ ಸೇರುವ ಕನಸಿತ್ತು. ಈ ಕುರಿತು ತಮ್ಮ ತಂದೆ-ತಾಯಿ, ದೊಡ್ಡಪ್ಪ ರಾಜಶೇಖರ ಅವರ ಬಳಿಯೂ ಹೇಳಿಕೊಂಡಿದ್ದ. ಕುಟುಂಬಸ್ಥರೂ ಸಹ ಇವನ ಆಸೆಗೆ ಬೆನ್ನುಲುಬಾಗಿ ನಿಂತಿದ್ದರು. ಮಗನ ಆಸೆ ಕಂಡು ತಂದೆ ಹಾಗೂ ದೊಡ್ಡಪ್ಪ ಇಬ್ಬರೂ ಸೇರಿ ಕಳೆದ 6 ತಿಂಗಳಿನಿಂದ ಸೂಕ್ತ ತರಬೇತಿ ನೀಡುತ್ತಿದ್ದರು.ಕೊರೋನಾ ಸಂಕಷ್ಟದಲ್ಲಿ:

ಕೊರೋನಾ ಸಂಕಷ್ಟದ ದಿನದಲ್ಲಿ ತಂದೆಯ ಕೆಲಸವೂ ಬಂದ್‌ ಆಗಿತ್ತು. ಇಂತಹ ವೇಳೆ ನಿತ್ಯವೂ ಬೆಳಗ್ಗೆ 5ಕ್ಕೆ ಎದ್ದು ಎಪಿಎಂಸಿ ಮಾರುಕಟ್ಟೆಗೆ ತೆರಳಿ ತರಕಾರಿ ತಂದು ಓಣಿ-ಓಣಿಗಳಲ್ಲಿ ಸಂಚರಿಸಿ ಮಾರಾಟ ಮಾಡಿ ಜೀವನ ನಡೆಸಿದ್ದು ಇದೇ ಸಂಜಯ್. ಚಿಕ್ಕವನಾಗಿರುವ ನಿನಗೆ ಮನೆಯ ಜವಾಬ್ದಾರಿ ಏತಕ್ಕೆ? ಎಲ್ಲ ಮಕ್ಕಳಂತೆ ನೀನು ಆಟವಾಡಲು ಹೋಗು ಎಂದು ತಂದೆ ಹೇಳಿದರೆ ಸಂಜಯ್‌ ಪ್ರಾಮಾಣಿಕನಾಗಿ ದುಡಿದು ತಿನ್ನಲು ಎಂದಿಗೂ ನಾಚಬಾರದು. ನಿನ್ನ ದುಡಿಮೆಯೊಂದಿಗೆ ನಾನೂ ಕೈಜೋಡಿಸುತ್ತೇನೆ ಎನ್ನುತ್ತಿದ್ದ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ್ದ ನನ್ನ ಪುತ್ರ ಅದಕ್ಕೆ ಬೇಕಾದ ಎಲ್ಲ ಬಟ್ಟೆ, ಪೂಜಾ ಸಾಮಗ್ರಿಗಳನ್ನು ಅವನೇ ದುಡಿದು ತಂದ ಹಣದಲ್ಲಿ ಖರೀದಿಸಿದ್ದ ಎಂದು ಮೃತ ಸಂಜಯ ತಂದೆ ಪ್ರಕಾಶ ಸವದತ್ತಿ ಕಣ್ಣೀರು ಹಾಕಿದರು.ಡಿ. 25ಕ್ಕೆ ಮನೆಯಲ್ಲಿ ಪೂಜೆಗೆ ಸಿದ್ಧತೆಡಿ. 25ರಂದು ಸಂಜಯ್‌ ನಿವಾಸದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಪೂಜೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಬೇಕಾದ ಹಣವನ್ನು ಇದೇ ಸಂಜಯ್‌ ತಾಯಿಗೆ ನೀಡಿದ್ದನು. ಆದರೆ, ಡಿ. 22ರ ಮಧ್ಯರಾತ್ರಿ ಸಿಲಿಂಡರ್‌ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಿಂದಾಗಿ ಸಂಜಯ ಇಹಲೋಕ ತ್ಯಜಿಸಿದ.

ತನಗೆ ತಿಳಿವಳಿಕೆ ಬಂದಾಗಿನಿಂದಲೂ ತಾನೇ ದುಡಿದು ಬಂದ ಹಣದಲ್ಲಿ ಪುಸ್ತಕ, ಬಟ್ಟೆ ಖರೀದಿಸುತ್ತಿದ್ದ. ಉಳಿದ ಹಣವನ್ನು ಮನೆ ನಿರ್ವಹಣೆಗೆ ನೀಡುತ್ತಿದ್ದ. ಬಾಳಿ ಬದುಕಿ ನಮ್ಮ ಜೀವನಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಮೃತನ ತಂದೆ ಪ್ರಕಾಶ ಸವದತ್ತಿ ಹೇಳಿದರು.