ಬೆಳ್ತಂಗಡಿ: ಕಂಬಳ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ಸೌಹಾರ್ದತೆಯನ್ನು ಯುವಜನತೆ, ವಿದ್ಯಾರ್ಥಿಗಳಿಗೆ ತಿಳಿಸುವ ಮಾಧ್ಯವಾಗಿದೆ ಎಂದು ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಹೇಳಿದರು. ಬಂಗಾಡಿ ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳ ಸಮಿತಿ ವತಿಯಿಂದ ನಡೆದ ಕಂಬಳ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಪಾಶ್ಚಾತ್ಯ ನಾಗರಿಕತೆಯ ಪ್ರಭಾವವಿದ್ದರೂ ಈ ರೀತಿಯ ಕ್ರೀಡೆಯಿಂದಾಗಿ ನಮ್ಮ ತುಳುನಾಡ ಸಂಸ್ಕೃತಿ ಏರಿದೆ ಎಂದರು.

ವರ್ಷದಲ್ಲಿ ಕಂಬಳ ನಡೆಯುವ ದಿವಸಗಳು 25 ರಿಂದ 26. ಆ ಸಮಯದಲ್ಲಿ ಕೋಣಗಳನ್ನು ಪರಿಪಾಲಿಸಲು ಯಜಮಾನರು, ಪರಿಚಾರಕರು ಪ್ರೀತಿಯಿಂದ ಸ್ವಲ್ಪ ಅದಕ್ಕೆ ಹೊಡೆತ‌ ನೀಡಿದರೂ‌ ಕೂಡ ವರ್ಷದ ಬಾಕಿ 340 ದಿನಗಳಲ್ಲಿ ಯಜಮಾನನಲ್ಲಿ ಹಿರಿಯ ಮಗ ಯಾರೆಂದು ಕೇಳಿದರೆ ಆತ ಪ್ರೀತಿಯಿಂದ ಸಾಕುವ ಕೋಣಗಳೇ ಎಂದು ಹೇಳುತ್ತಾನೆ. ಆ ರೀತಿ ಅದನ್ನು ಸಾಕಿರುತ್ತಾರೆ ಎಂಬುದನ್ನು ನಾವು ಮನವರಿಕೆ ಮಾಡಬೇಕಾದುದು ನಮ್ಮ ಜವಾಬ್ದಾರಿ ಎಂದು ಅವರು ಸೂಚ್ಯವಾಗಿ ತಿಳಿಸಿದರುಯುವ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಅಭಿನಂದನ್ ಹರೀಶ್‌ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಪುಷ್ಪರಾಜ ಶೆಟ್ಟಿ ಸಹಿತ ಪದಾಧಿಕಾರಿಗಳು ಸಭಾಪತಿಗಳನ್ನು ಗೌರವಿಸಿದರು. ಉದ್ಘಾಟನೆಗೂ ಮುನ್ನ ಕೊಲ್ಲಿ ದುರ್ಗಾ ದೇವಿ ಸನ್ನಿದಾನದಿಂದ ಕೋಣಗಳು ಹಾಗೂ ಅತಿಥಿಗಳ ಒಡಗೂಡಿ‌ ಮೆರವಣಿಗೆ ನಡೆಯಿತು. ಬೆಳಗ್ಗೆ ಸಂಪ್ರದಾಯ ಬದ್ಧವಾಗಿ ಕರೆ ಪೂಜೆ ನೆರವೇರಿತು.