ಸಾರಾಂಶ
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ ಈ ವರ್ಷದಲ್ಲಿ ೨೬ ಕಂಬಳಗಳು ನಡೆಯಲಿದೆ. ಈ ವರ್ಷದಿಂದ ಶಿವಮೊಗ್ಗದಲ್ಲಿಯೂ ಕಂಬಳ ನಡೆಸಲಾಗುವುದು. ಅಕ್ಟೋಬರ್ ೨೬ರಂದು ಬೆಂಗಳೂರಿನಲ್ಲಿ ಮೊದಲ ಕಂಬಳ ನಡೆಯಲಿದ್ದು ೨೦೨೫ರ ಎಪ್ರಿಲ್ ೧೯ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.ಈಗಾಗಲೇ ಜಿಲ್ಲೆಯಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಮತ್ತಷ್ಟು ಆಕರ್ಷಣೀಯವಾಗಿ ನಡೆಸಲು ಕೆಲವೊಂದು ನಿಯಮಗಳನ್ನು ಆಯಾ ಕಂಬಳ ಸಮಿತಿಗಳು ಪಾಲಿಸಬೇಕಾಗಿದ್ದು ಅದಕ್ಕಾಗಿ ಉಪನಿಬಂಧನೆಗಳನ್ನು ರಚಿಸಲಾಗುವುದು. ಕಂಬಳ ವಿಳಂಬವಾಗುವುದನ್ನು ತಡೆಯಲು ರೂಪುರೇಶೆಗಳನ್ನು ಸಿದ್ಧಪಡಿಸಲಾಗುವುದು.ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ಈ ವರ್ಷದಿಂದ ಪುನರಾರಂಭಿಸಲಾಗುವುದು. ಕಂಬಳವನ್ನು ಪ್ರವಾಸೋದ್ಯಮದ ಭಾಗವಾಗಿಸುವ ನಿಟ್ಟಿನಲ್ಲಿ ಈ ಕಂಬಳದಲ್ಲಿ ೪ ದಿನಗಳ ‘ತುಳುನಾಡ ವೈಭವ’ ಕಾರ್ಯಕ್ರಮ ನಡೆಯಲಿದೆ. ಕಂಬಳ ಕುರಿತ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು, ಅಲ್ಲದೆ ಕಂಬಳ ಭವನ ನಿರ್ಮಿಸಲಾಗುವುದು ಎಂದರು. ಈ ಜಿಲ್ಲೆಯಲ್ಲಿ ನಡೆಯುವ ೨೪ ಕಂಬಳಗಳಿಗೂ ತಲಾ ೫ ಲಕ್ಷದಂತೆ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು. ಈ ಕುರಿತು ಕಂಬಳ ನಿಯೋಗ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂರು.ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ನವೀನಚಂದ್ರ ಆಳ್ವ, ಶ್ರೀಕಾಂತ ಭಟ್, ಸಂದೀಪ ಶೆಟ್ಟಿ, ಪ್ರಶಾಂತ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪಗಾರರ ಸಂಚಾಲಕ ವಿಜಯ್‌ಕುಮಾರ್ ಕಂಗಿನಮನೆ ಮತ್ತಿತರರು ಇದ್ದರು.