ಕಂಬಾಳಿಮಠ ಗುರುಗಳ ಸರಳ ಜೀವನ, ವಿಶಿಷ್ಟ ಭಾಷಾ ವೈಖರಿ ಹಾಗೂ ಸಾಹಿತ್ಯದ ಬಗೆಗಿನ ಅಪಾರ ಆಸಕ್ತಿ ಎಲ್ಲರಿಗೂ ಮಾದರಿಯಾಗಿದ್ದವು.

ಕೊಪ್ಪಳ: ಹಿರಿಯ ಸಾಹಿತಿ, ನಿವೃತ್ತ ಕನ್ನಡ ಶಿಕ್ಷಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಕ್ರಿಯ ಪದಾಧಿಕಾರಿಯಾಗಿದ್ದ ದಿ. ಎಸ್.ಎಂ. ಕಂಬಾಳಿಮಠ ಅವರ ಸಾಹಿತ್ಯ ಸೇವೆ, ಹಳೆಗನ್ನಡ ಭಾಷೆ ಮತ್ತು ವ್ಯಾಕರಣದ ಮೇಲಿನ ಪಾಂಡಿತ್ಯ, ವಚನ ಸಾಹಿತ್ಯದ ಕುರಿತ ಜ್ಞಾನ ಹಾಗೂ ಉನ್ನತ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡ್ರ ಹೇಳಿದರು.

ಜಿಲ್ಲಾ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತೀಚೆಗೆ ನಿಧನರಾದ ಎಸ್.ಎಂ. ಕಂಬಾಳಿಮಠ ಅವರಿಗೆ ಸೋಮವಾರ ಸಂಜೆ ನಗರದ ಗೋವಿಂದರಾಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಬಾಳಿಮಠ ಗುರುಗಳ ಸರಳ ಜೀವನ, ವಿಶಿಷ್ಟ ಭಾಷಾ ವೈಖರಿ ಹಾಗೂ ಸಾಹಿತ್ಯದ ಬಗೆಗಿನ ಅಪಾರ ಆಸಕ್ತಿ ಎಲ್ಲರಿಗೂ ಮಾದರಿಯಾಗಿದ್ದವು. ಅವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಜೀವನ ಚರಿತ್ರೆ ಕುರಿತು ಕೈಪಿಡಿ ಹೊರತರುವ ಮೂಲಕ ಅವರ ಸಾಹಿತ್ಯಿಕ ಕೊಡುಗೆ ಮತ್ತು ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಈ ಕಾರ್ಯಕ್ಕೆ ಸಾಹಿತಿಗಳೆಲ್ಲರೂ ಸಹಕರಿಸಿದರೆ ಅದುವೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ, ಕಂಬಾಳಿಮಠ ಗುರುಗಳು ತಮ್ಮ ಸರಳ ವ್ಯಕ್ತಿತ್ವ ಹಾಗೂ ಆತ್ಮೀಯ ಒಡನಾಟದಿಂದ ಎಲ್ಲರ ಪ್ರೀತಿ ಗಳಿಸಿದ್ದರು. ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಸೇವೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ ಬಿ. ನೆಲಾಗಣಿ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಹಾದಿಮನಿ, ತಾಲೂಕು ಅಧ್ಯಕ್ಷ ಮೈಲಾರಪ್ಪ ಉಂಕಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎ.ಪಿ. ಅಂಗಡಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಪದಾಧಿಕಾರಿ ಡಾ. ಬಸವರಾಜ ಗಡಾದ್, ಸಮಾಜ ಸೇವಕ ಮಂಜುನಾಥ ಸೊರಟೂರು ಸೇರಿದಂತೆ ಸಾಹಿತಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ದಿ. ಎಸ್.ಎಂ. ಕಂಬಾಳಿಮಠ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.