ಎಮ್ಮಿಗನೂರು ಗ್ರಾಮದಲ್ಲಿ ಏಳು-ಎಂಟು ದಲ್ಲಾಳಿಗಳು ಅಧಿಕಾರಿಗಳ ಸಹಕಾರದಿಂದ ಪಹಣಿಗಳನ್ನು ತಿದ್ದುಪಡಿ ಮಾಡಿಕೊಂಡು ಜೋಳ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ

ಕಂಪ್ಲಿ: ಜೋಳ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರೈತರ ಜೋಳ ಬಿಟ್ಟು ದಲ್ಲಾಳಿಗಳ ಜೋಳಕ್ಕೆ ನೋಂದಣಿ ಮಾಡಲಾಗುತ್ತಿದೆ ಎಂಬ ಆರೋಪದೊಂದಿಗೆ ರೈತ ಸಂಘದ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರನ್ನು ಭೇಟಿ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಜ.14ರಿಂದ ಜೋಳ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಎಮ್ಮಿಗನೂರು ಗ್ರಾಮದಲ್ಲಿ ಏಳು-ಎಂಟು ದಲ್ಲಾಳಿಗಳು ಅಧಿಕಾರಿಗಳ ಸಹಕಾರದಿಂದ ಪಹಣಿಗಳನ್ನು ತಿದ್ದುಪಡಿ ಮಾಡಿಕೊಂಡು ಜೋಳ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ ಎಂದು ಆರೋಪಿಸಿದರು. ಇದರಿಂದ ನಿಜವಾಗಿ ಜೋಳ ಬೆಳೆದ ರೈತರಿಗೆ ಭಾರೀ ಅನ್ಯಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ರೈತರಿಂದ ಕಡಿಮೆ ಬೆಲೆಗೆ ಜೋಳ ಖರೀದಿಸಿದ ದಲ್ಲಾಳಿಗಳು ಅದೇ ಜೋಳವನ್ನು ಈಗ ಸರ್ಕಾರಕ್ಕೆ ಮರುಮಾರಾಟ ಮಾಡುತ್ತಿದ್ದಾರೆ. ಭತ್ತ ನಮೂದಾಗಿದ್ದ ಪಹಣಿಗಳನ್ನು ಜೋಳ ಎಂದು ತಿದ್ದುಪಡಿ ಮಾಡಿ 400 ರಿಂದ 500 ಎಕರೆ ವಿಸ್ತೀರ್ಣದ ಜೋಳವನ್ನು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮದಲ್ಲಿ ಸಂಬಂಧಿಸಿದ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರತಿ ರೈತರಿಂದ 15 ಕ್ವಿಂಟಲ್ ಜೋಳ ಖರೀದಿಸುವ ಮಿತಿಯನ್ನು 30 ಕ್ವಿಂಟಲ್‌ಗೆ ಹೆಚ್ಚಿಸಬೇಕು. ನಿಜವಾಗಿ ಜೋಳ ಬೆಳೆದ ರೈತರಿಂದ ಮಾತ್ರ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್ ಮಾತನಾಡಿ, ಬಡ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಳೆದ 15 ದಿನಗಳಿಂದ ಸಂಘದ ಪದಾಧಿಕಾರಿಗಳು ಶ್ರಮಿಸಿ ಜೋಳ ಖರೀದಿ ಕೇಂದ್ರ ಆರಂಭಿಸಿದ್ದಾರೆ. ಆದರೆ, ದಲ್ಲಾಳಿಗಳು ಪಹಣಿ ದಾಖಲೆಗಳನ್ನು ಸಂಗ್ರಹಿಸಿ ಭತ್ತ ಬೆಳೆಸಿರುವ ಜಮೀನನ್ನು ಜೋಳ ಎಂದು ತಿದ್ದುಪಡಿ ಮಾಡಿಸಿ ಜೋಳ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನೈಜ ರೈತರು ವಂಚಿತರಾಗುತ್ತಿದ್ದಾರೆ ಎಂದರು.

ಭತ್ತದಿಂದ ಜೋಳಕ್ಕೆ ತಿದ್ದುಪಡಿಗೊಳಿಸಿದ ಪಹಣಿಗಳನ್ನು ತಕ್ಷಣ ರದ್ದುಗೊಳಿಸಿ, ಅಂತಹ ಪಹಣಿಗಳಡಿ ಜೋಳ ಖರೀದಿ ಮಾಡಬಾರದು. ಈ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಹಣಿ ತಿದ್ದುಪಡಿಗೊಳಿಸಿದವರ ತಲೆದಂಡವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ನಗರ ಅಧ್ಯಕ್ಷ ಎನ್. ತಿಮ್ಮಪ್ಪನಾಯಕ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್, ಪದಾಧಿಕಾರಿಗಳಾದ ಆದೋನಿ ರಂಗಪ್ಪ, ಡಿ. ಮುರಾರಿ, ವಿ.ಟಿ. ನಾಗರಾಜ, ಎಮ್ಮಿಗನೂರು ಗ್ರಾಮ ಪಂಚಾಯಿತಿ ಸದಸ್ಯ ಸಾಯಿಬಣ್ಣ, ಆದಿಮನೆ ಸಣ್ಣ ಜಡೆಪ್ಪ, ಬಾರಕೀರ ರಾಜು, ಭಾಸ್ಕರ, ವಿ.ಡಿ. ಜಡೆಪ್ಪ, ನೆಲ್ಲೂಡಿ ರಾಜಾಸಾಬ್, ಮಾರೇಶ್ ಇದ್ದರು.

ತಹಸೀಲ್ದಾರ್ ಜೂಗಲ ಮಂಜುನಾಯಕ ಪ್ರತಿಕ್ರಿಯಿಸಿ, ರೈತ ಸಂಘದ ಆರೋಪಗಳ ಹಿನ್ನೆಲೆಯಲ್ಲಿ ಜೋಳ ಬೆಳೆದಿರುವ ಸರ್ವೇ ನಂಬರ್‌ಗಳ ಪಹಣಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ಅಕ್ರಮ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.