ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆ ಭೀತಿ

| Published : Oct 23 2024, 01:48 AM IST

ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ, ಅಲ್ಲದೇ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ, ಅಲ್ಲದೇ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿರುವುದರಿಂದ ನದಿಗೆ ಮಂಗಳವಾರ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬಂದಿದೆ.

ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದೂ, ಯಾವ ಕ್ಷಣದಲ್ಲಾದರೂ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ. ಅಲ್ಲದೇ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ ಎದುರಾಗಿದೆ. ಇನ್ನು ಸೇತುವೆ ಮೇಲಿನ ಸಂಪೂರ್ಣ ಸಂಚಾರಕ್ಕೆ ನಿರ್ಬಂಧ ಹೇರಿದರೂ ನೀರು ಬಾರದ ಕಾರಣ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲು ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಂಜೆ 5ರ ವರೆಗೂ ಸಂಚಾರಕ್ಕೆ ಅನುವು ನೀಡಿ ಬಳಿಕ ಸಂಚಾರಕ್ಕೆ ನಿರ್ಬಂಧ ಹೇರಿ ಪಾದಚರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜುಲೈ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದುಬಂದ ಹಿನ್ನೆಲೆ ಸೇತುವೆ ಮೇಲಿನ ಸಂಚಾರಕ್ಕೆ ಬರೋಬ್ಬರಿ ಒಂದು ತಿಂಗಳ ಕಾಲ ನಿರ್ಬಂಧ ಹೇರಲಾಗಿತ್ತು. ಅಲ್ಲದೇ ಇದೆ ತಿಂಗಳ ಅ. 12ರಂದು ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿತ್ತಾದರೂ ಸೇತುವೆ ಮೇಲೆ ನೀರು ಬಾರದ ಕಾರಣ ಸಂಚಾರಕ್ಕೆ ಅನುವು ಕಲ್ಪಿಸಿತ್ತು. ಇದರಿಂದ ಸಾರ್ವಜನಿಕರಿಗೆ ಅಷ್ಟೊಂದು ಸಮಸ್ಯೆ ಎದುರಾಗಿರಲಿಲ್ಲ. ಇದೀಗ ತುಂಗಭದ್ರಾ ಜಲಾಶಯದಲ್ಲಿನ ನೀರಿನ ಒಳ ಹರಿವು ಹಾಗೂ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದು ರೈತರಿಗೆ ಬೆಳೆಗಳ ನಷ್ಟದ ಭೀತಿ ಎದುರಾದರೆ, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ, ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಂಗಾವತಿಗೆ ತೆರಳಲು ಸಮಸ್ಯೆ ಬಂದೊದಗಿದೆ. ಸೇತುವೆಯ ಬಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.