ಕಂಪ್ಲಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ?

| Published : Jan 16 2025, 12:48 AM IST

ಸಾರಾಂಶ

ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು ಜ. 23ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ.

ಬಿ.ಎಚ್.ಎಂ.ಅಮರನಾಥಶಾಸ್ತ್ರಿ

ಕಂಪ್ಲಿ: ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರ ಸದಸ್ಯರೊಬ್ಬರು ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಗಿತ್ತು. ಇದೀಗ ನ್ಯಾಯಾಲಯ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು ಜ. 23ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರಕ್ಕಾಗಿ ಸರ್ಕಸ್ ನಡೆಸುತ್ತಿದ್ದರೂ, ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬೀಳಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

2019ರ ನವೆಂಬರ್ 12ರಂದು ಪುರಸಭೆ ಚುನಾವಣೆ ನಡೆಯಿತು. ನ. 14ರಂದು ಫಲಿತಾಂಶ ಪ್ರಕಟವಾಯಿತು. 2020ರ ನ. 6ರಂದು ಅಧ್ಯಕ್ಷೆ-ಉಪಾಧ್ಯಕ್ಷ ಚುನಾವಣೆ ನಡೆಯಿತು. ಪುರಸಭೆ ಮೊದಲ ಅವಧಿಗೆ ಅಧ್ಯಕ್ಷರಾಗಿ ಶಾಂತಲಾ ವಿ.ವಿದ್ಯಾಧರ, ಉಪಾಧ್ಯಕ್ಷೆಯಾಗಿ ನಿರ್ಮಲಾ ಕೆ.ವಸಂತಕುಮಾರ್‌ ಆಯ್ಕೆಯಾದರು. 2020ರ ನ. 26ರಂದು ಪುರಸಭೆ ಸದಸ್ಯರ ಮೊದಲ ಸಭೆ ನಡೆಯಿತು. ಇಲ್ಲಿಂದ ಪುರಸಭೆ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತು. 2023ರ ಮಾ. 10ರಂದು ಶಾಂತಲಾ ವಿ.ವಿದ್ಯಾಧರ ತಮ್ಮ ಅಧ್ಯಕ್ಷ ಅವಧಿಯ ಕೊನೆಯ ಸಭೆ ನಡೆಸಿದರು. 2023 ಮೇ 12ರಂದು ಆಡಳಿತಾಧಿಕಾರಿಗಳಾಗಿ ಎಸಿ ಅಧಿಕಾರ ಸ್ವೀಕರಿಸಿದರು.

ಚುನಾವಣೆ ವಿಳಂಬ

ಉಳಿದ ಅವಧಿಗೆ ಮೀಸಲಾತಿ ಘೋಷಣೆ ವಿಚಾರದಲ್ಲಿ ವಿಳಂಬವಾಗಿದ್ದರಿಂದ ಚುನಾವಣೆ ನಡೆಯದೇ ಸದಸ್ಯರು ಅತಂತ್ರರಾಗಿದ್ದರು. ಬಳಿಕ ಸರ್ಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಪ್ರಕಟಿಸಿ, 2024ರ ಆ. 21ಕ್ಕೆ ಚುನಾವಣೆ ನಿಗದಿಗೊಳಿಸಿತ್ತು. ಆದರೆ, ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಪಂಗಡಕ್ಕೆ ಸಿಗಬೇಕು ಎಂದು ಪುರಸಭೆ ಸದಸ್ಯರಾದ ಎನ್. ರಾಮಾಂಜನೇಯಲು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರಿಂದ ಮುಂದೂಡಲ್ಪಟ್ಟಿತ್ತು. ಇದೀಗ ನ್ಯಾಯಾಲಯ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಹಿಂದೆ ನಿಗದಿ ಮಾಡಿದ ಮೀಸಲಿನಂತೆ ಜ. 23ರಂದು ಚುನಾವಣೆ ನಿಗಧಿಯಾಗಿದೆ. ನ್ಯಾಯಾಲಯದ ತೀರ್ಪು ಹೊರ ಬಂದು ದಿನಾಂಕ ಘೋಷಣೆಯಾಗುತ್ತಿದಂತೆ ಎರಡೂ ಪಕ್ಷಗಳ ನಾಯಕರು ಅಧಿಕಾರಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.

ಕಂಪ್ಲಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ?

ಕಳೆದ ನಾಲ್ಕು ವರ್ಷಗಳ ಹಿಂದೆ ಪುರಸಭೆಯ 23 ವಾರ್ಡ್ ಸದಸ್ಯರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 13ರಲ್ಲಿ ಬಿಜೆಪಿ ಅಭ್ಯರ್ಥಿಗಳು, 10ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಮೊದಲ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ವೇಳೆ 13 ಸದಸ್ಯರ ಬಹುಮತ ಹೊಂದಿದ್ದ ಬಿಜೆಪಿ ಅಭ್ಯರ್ಥಿಗಳು ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದ ನಾಯಕರು ಸ್ಥಳೀಯ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬ ಉದ್ದೇಶದಿಂದ ಭಾರಿ ಕಸರತ್ತು ನಡೆಸಿದ್ದಾರೆ. ಸಂಸದರು, ಶಾಸಕರ ಮತ ಸೇರಿ ಕಾಂಗ್ರೆಸ್‌ಗೆ 12 ಮತಗಳಿವೆ. ಒಂದು ವೇಳೆ ಕಾಂಗ್ರೆಸ್ ನಾಯಕರೇನಾದರೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಜಕೀಯ ಚಾಣಾಕ್ಷತನ ತೋರಿಸಿ ಬಿಜೆಪಿ ಸದಸ್ಯರಲ್ಲಿ ಇಬ್ಬರು ಚುನಾವಣೆಯ ವೇಳೆ ಗೈರು ಹಾಜರಾಗುವಂತೆ ಮಾಡಿದರೆ ಕಾಂಗ್ರೆಸ್ ಅಧಿಕಾರ ವಹಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನೊಂದೆಡೆ, ಬಿಜೆಪಿ ನಾಯಕರು ಪುರಸಭೆಯಲ್ಲಿ ಮುಂಚೆಯಿದ್ದ ತಮ್ಮ ಅಧಿಕಾರ ಉಳಿಸಿಕೊಳ್ಳೋಕೆ ಪ್ರಯತ್ನ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಚಾಣಾಕ್ಷತನದಿಂದ ಕಂಪ್ಲಿ ಪುರಸಭೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರ? ಅಥವಾ ಮುಂಚಿನಂತೆ ಬಿಜೆಪಿ ಯವರೇ ಅಧ್ಯಕ್ಷರಾಗಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.