ಸಾರಾಂಶ
ಕಣಚೂರು ಸಮೂಹ ಸಂಸ್ಥೆಗಳ ಸ್ಥಾಪಕ ಯು.ಕಣಚೂರು ಮೋನು ಇವರ ಆತ್ಮಚರಿತ್ರೆಯನ್ನು ಮುಳಿಯ ಶಂಕರ್ ಭಟ್ ಬರೆದಿದ್ದು, ಆಂಗ್ಲ ಭಾಷೆಗೆ ಬಾಲಕೃಷ್ಣ ಹೊಸಮಣಿ ಇವರು ತರ್ಜುಮೆ ನಡೆಸಿದ್ದಾರೆ. ಒಟ್ಟು 382 ಪುಟಗಳ ಸುದೀರ್ಘ ಜೀವನ ಚರಿತ್ರೆಯನ್ನು ಪುಸ್ತಕ ಒಳಗೊಂಡಿದೆ. ಕೃತಿ ಮಂಗಳವಾರ ಬಿಡುಗಡೆಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಉಳ್ಳಾಲ
ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ದಶಮಾನೋತ್ಸವ ಪೂರೈಸುತ್ತಿರುವ ಸುಸಂದರ್ಭದಲ್ಲಿ ಮೈಲುಗಲ್ಲಾಗಿ ಫೆ.25 ರಂದು ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ನಿರ್ದೇಶಕ ಕಣಚೂರು ಅಬ್ದುಲ್ ರೆಹಮಾನ್ ಹೇಳಿದ್ದಾರೆ.ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಚೂರು ಆಯುರ್ವೇದ ಆಸ್ಪತ್ರೆ, ಕಣಚೂರು ಫಾರ್ಮಸಿ ಕಾಲೇಜು, 1000 ಆಸನವುಳ್ಳ ಸುಸಜ್ಜಿತ ಆಡಿಟೋರಿಯಂ, ಆಸ್ಪತ್ರೆ ಸ್ಥಾಪಕ ಯು.ಕಣಚೂರು ಮೋನು ಆತ್ಮಚರಿತ್ರೆ ಪುಸ್ತಕ ಅನಾವರಣ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗಾಗಿ ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್ ಸಹಿತ ಲೆವೆಲ್ 3 ಐಸಿಯು ಹಾಗೂ ಶಸ್ತ್ರಚಿಕಿತ್ಸಾ ಘಟಕಗಳ ಉದ್ಘಾಟನೆ ನಡೆಯಲಿದೆ ಎಂದು ವಿವರಿಸಿದರು.
ಮಂಗಳವಾರ ನಡೆಯುವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್, ಲೆವೆಲ್ 3 ಐಸಿಯು ಮತ್ತು ಶಸ್ತ್ರಚಿಕಿತ್ಸಾ ಕೇಂದ್ರ ಉದ್ಘಾಟಿಸಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಕಣಚೂರು ಕಾನ್ಫರೆನ್ಸ್ ಸಭಾಂಗಣ ಹಾಗೂ ಕಣಚೂರು ಸ್ಥಾಪಕ ಯು.ಕಣಚೂರು ಮೋನು ಆತ್ಮಚರಿತ್ರೆ ಪುಸ್ತಕದ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಣಚೂರು ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃಧ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಕಣಚೂರು ಫಾರ್ಮಸಿ ಕಾಲೇಜು ಉದ್ಘಾಟಿಸಲಿದ್ದಾರೆ. ಸ್ಥಾಪಕ ಯು.ಕಣಚೂರು ಮೋನು ಇವರ ಆತ್ಮಚರಿತ್ರೆಯನ್ನು ಮುಳಿಯ ಶಂಕರ್ ಭಟ್ ಬರೆದಿದ್ದು, ಆಂಗ್ಲ ಭಾಷೆಗೆ ಬಾಲಕೃಷ್ಣ ಹೊಸಮಣಿ ಇವರು ತರ್ಜುಮೆ ನಡೆಸಿದ್ದಾರೆ. ಒಟ್ಟು 382 ಪುಟಗಳ ಸುದೀರ್ಘ ಜೀವನ ಚರಿತ್ರೆಯನ್ನು ಪುಸ್ತಕ ಒಳಗೊಂಡಿದೆ ಎಂದರು.ವೈದ್ಯಕೀಯ ಕಾಲೇಜುಗಳ ಡೀನ್ ಶಹನವಾಝ್ ಮಾಣಿಪ್ಪಾಡಿ ಕಾರ್ಯಕ್ರಮಗಳ ವಿವರ ನೀಡಿ, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಮಾಜಿ ಸಚಿವೆ ಮೋಟಮ್ಮ ಅವರ ಉಪಸ್ಥಿತಿಯನ್ನು ತಿಳಿಸಿದರು.
ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ವೈದ್ಯ ವಿಜ್ಞಾನಗಳ ಸಲಹಾ ಸಮಿತಿ ಡಾ. ವೆಂಕಟರಾಯ ಪ್ರಭು ಇದ್ದರು.