ಬಳ್ಳಾರಿಯಲ್ಲಿ ಸಂಭ್ರಮದಿಂದ ಜರುಗಿದ ಕನಕ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ

| Published : Mar 20 2024, 01:18 AM IST

ಬಳ್ಳಾರಿಯಲ್ಲಿ ಸಂಭ್ರಮದಿಂದ ಜರುಗಿದ ಕನಕ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ಕನಕದುರ್ಗಮ್ಮದೇವಿ ದೇವಸ್ಥಾನ, ಪ್ರವೇಶದ್ವಾರ, ಗರ್ಭಗುಡಿಯನ್ನು ತಳಿರು-ತೋರಣ, ಅನೇಕ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.

ಬಳ್ಳಾರಿ: ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ನೆರವೇರಿತು.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಸಮೂಹ ಸಿಡಿಬಂಡಿ ಪ್ರದಕ್ಷಿಣೆಯ ದರ್ಶನ ಪಡೆದು ಪುನೀತರಾದರು.

ಇಲ್ಲಿನ ಕೌಲ್‌ಬಜಾರ್ ಪ್ರದೇಶದ ಸಜ್ಜನ ಗಾಣಿಗ ಸಮಾಜದ ಕುಟುಂಬವೊಂದರ ಮನೆಯಿಂದ ಸಿಂಗರಿಸಿಕೊಂಡು ವಿವಿಧ ಮಂಗಳ ವಾದ್ಯಗಳೊಂದಿಗೆ ಆಗಮಿಸಿದ್ದ ಮೂರು ಜೋಡಿ ಎತ್ತುಗಳು ವಿವಿಧ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಸಿಡಿಬಂಡಿ ಹೊತ್ತು ಕನಕ ದುರ್ಗಮ್ಮದೇವಿ ದೇಗುಲ ಸುತ್ತ ಪ್ರದಕ್ಷಿಣೆ ಹಾಕಿದವು. ಇದೇ ವೇಳೆ ನೂರಾರು ಯುವಕರು ಸಿಡಿಬಂಡಿ ಹಿಂದೆಯೇ ಓಡುತ್ತಾ ಜಯಘೋಷ ಕೂಗಿದರು. ಸಿಡಿಬಂಡಿ ಪ್ರದಕ್ಷಣೆ ಹಾಕುವ ವೇಳೆ ಭಕ್ತರು ಹೂವು, ಹಣ್ಣು, ಜೀವಂತ ಕೋಳಿಗಳನ್ನು ತೂರಿ ಹರಕೆ ತೀರಿಸಿದರು.

ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ಕನಕದುರ್ಗಮ್ಮದೇವಿ ದೇವಸ್ಥಾನ, ಪ್ರವೇಶದ್ವಾರ, ಗರ್ಭಗುಡಿಯನ್ನು ತಳಿರು-ತೋರಣ, ಅನೇಕ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ದೇವಿ ಮೂರ್ತಿಗೆ ಸ್ವರ್ಣಮುಖ ಕವಚಗಳನ್ನು ಧರಿಸಿ, ವಿವಿಧ ಪುಷ್ಪ ಪತ್ರೆಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಕನಕ ದುರ್ಗಮ್ಮದೇವಿಗೆ ಪೂಜೆ ಸಲ್ಲಿಸಲು ಭಕ್ತರು ಬೆಳಗ್ಗೆಯಿಂದಲೇ ಸಾಲುಗಟ್ಟಿದ್ದರು. ಬೆಳಗಿನಜಾವ 5 ಗಂಟೆಯಿಂದಲೇ ದರ್ಶನಕ್ಕೆ ಅವಕಾಶವಿತ್ತು. ಬಿಸಿಲಿನ ಪ್ರಖರ ಹೆಚ್ಚಾಗಿರುವುದರಿಂದ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಸುತ್ತಮುತ್ತ ಬ್ಯಾನರ್‌, ಫ್ಲೆಕ್ಸ್‌ ಹಾಕುವುದನ್ನು ಈ ಬಾರಿ ನಿಷೇಧಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಸಿಡಿಬಂಡಿ ಕಾಣಿಸುವುದಿಲ್ಲ ಎಂಬ ಕಾರಣಕ್ಕಾಗಿ ಫ್ಲೆಕ್ಸ್‌ ಹಾವಳಿಗೆ ಕಡಿವಾಣ ಬಿದ್ದಿದೆ. ಬಿಸಿಲು ಸರಿದು ಸಂಜೆಯ ತಂಪು ಆವರಿಸುತ್ತಿದ್ದಂತೆಯೇ ಸಿಡಿಬಂಡಿ ಉತ್ಸವಕ್ಕೆ ಚಾಲನೆ ದೊರೆಯಿತು.

ಸಿಡಿಬಂಡಿ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಮಾರು ಅರ್ಧ ಕಿ.ಮೀ.ವರೆಗೆ ವಾಹನಗಳ ಓಡಾಟ ನಿರ್ಬಂಧವಿತ್ತು. ಹೀಗಾಗಿ ಭಕ್ತರು ಕುಟುಂಬ ಸಮೇತರಾಗಿ ನಡೆದುಕೊಂಡು ದೇವಸ್ಥಾನದ ಕಡೆ ಹೆಜ್ಜೆ ಹಾಕಿದರು. ನಡೆದು ಬರುವ ಭಕ್ತರಿಗೆ ನಗರದ ನಾನಾ ಸಂಘ-ಸಂಸ್ಥೆಗಳು ಮಜ್ಜಿಗೆ, ಪಾನಕ, ಪುಳಿಯೋಗರೆ ವಿತರಿಸಿದವು. ಇಲ್ಲಿನ ವಾಲ್ಮೀಕಿ ವೃತ್ತ, ತಾಳೂರು ರಸ್ತೆ, ಕಪ್ಪಗಲ್ ರಸ್ತೆಯಲ್ಲಿ ಬೆಳಗ್ಗೆಯಿಂದಲೇ ಅನ್ನಸಂತರ್ಪಣೆ ನಡೆಯಿತು.

ಸಂಜೆ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ವಾಸ್ತವ್ಯ ಮಾಡಿದರು. ಕನ್ನಡ-ಸಂಸ್ಕೃತಿ ಇಲಾಖೆ ದೇವಸ್ಥಾನ ಮುಂಭಾಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು. ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ವಹಿಸಬೇಕಾದ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿತು. ಭದ್ರತೆ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ನೂರಾರು ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನ ಬಳಿ ಹಾಗೂ ವಿವಿಧ ರಸ್ತೆಗಳಲ್ಲಿ ನಿಯೋಜಿಸಲಾಗಿತ್ತು.