ಸಮ ಸಮಾಜದ ನಿರ್ಮಾಣಕ್ಕೆ ಕನಕ ಆದರ್ಶ

| Published : Nov 19 2024, 12:49 AM IST

ಸಾರಾಂಶ

ದಾರ್ಶನಿಕರಾದ ಕನಕದಾಸರು ಅಸ್ಪಶ್ಯತೆ ನಿವಾರಣೆಯ ಹೋರಾಟ ರೂಪಿಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿ ಆದರ್ಶವಾಗಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ದಾರ್ಶನಿಕರಾದ ಕನಕದಾಸರು ಅಸ್ಪಶ್ಯತೆ ನಿವಾರಣೆಯ ಹೋರಾಟ ರೂಪಿಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿ ಆದರ್ಶವಾಗಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಅವರು ಕಡೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 537ನೇ ಕನಕ ಜಯಂತಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸಮಾಜದ ದಾರ್ಶನಿಕರ ಜಯಂತಿಗಳಿಗೂ ಸರ್ಕಾರಗಳು ಆದ್ಯತೆ ನೀಡುತ್ತಾ ಬಂದಿವೆ. ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ನಾಶಕ್ಕೆ ನಾಂದಿ ಹಾಡಿದರು. ಅವರ ನಂತರ 16ನೇ ಶತಮಾನದಲ್ಲಿ ಕನಕದಾಸರು ಮೌಢ್ಯತೆ ಮತ್ತು ಜಾತಿ ವಿನಾಶಕ್ಕೆ ಹೋರಾಟ ರೂಪಿಸಿದರು ಎಂದು ತಿಳಿಸಿದರು.

ಇನ್ನು ಕಡೂರು ಕ್ಷೇತ್ರದಲ್ಲಿ ಕುರುಬ ಸಮಾಜದಿಂದ ಅನೇಕ ಶಾಸಕರು, ಪುರಸಭೆ ಅಧ್ಯಕ್ಷರು ಬಂದು ಹೋಗಿದ್ದು, ಸಮಾಜದ ಭವನ ನಿರ್ಮಾಣಕ್ಕೆ ನನ್ನ ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಯಾತ್ರೆಗೆ ಹೋಗುವಾಗ ಕನಕದಾಸರು ಕಡೂರಿನ ಕನಕರಾಯನ ಗುಡ್ಡದಲ್ಲಿ ತಂಗಿದ್ದ ಜಾಗದಲ್ಲಿರುವ ಶ್ರೀಕನಕರಾಯ ಮೂರ್ತಿಗೆ ವಿಶೇಷ ಪೂಜೆ ನಡೆಯುತ್ತಿದೆ. ದೇವಾಲಯ ನಿರ್ಮಾಣ ಮತ್ತು ಅಭಿವೃದ್ದಿಗೆ ₹8 ಲಕ್ಷ ಅನುದಾನ ನೀಡಿ, ಕೊಳವೆ ಬಾವಿ ಕೊರೆಸಿದ್ದು ಯಾತ್ರಾ ಸ್ಥಳವಾಗಿ ಮಾಡಲು ಆದ್ಯತೆ ನೀಡುತ್ತೇನೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರಿನಿವಾಸ್ ಮಾತನಾಡಿ, ರಾಜನಾಗುತ್ತೇನೆ, ದಾಸನಾಗುವುದಿಲ್ಲ ಎನ್ನುತಿದ್ದ ಕನಕದಾಸರು ಮೌಢ್ಯತೆ ಮತ್ತು ಜಾತಿಯ ವಿಷದಲ್ಲಿ ಸಮಾಜವನ್ನು ತಿದ್ದುವ ಕಾರ್ಯಕ್ಕೆ ಮುಂದಾಗುವ ಮೂಲಕ ವೈಭೋಗವನ್ನು ತ್ಯಜಿಸಿದರು. ದಾಸರಾಗಿ ಕೃತಿಗಳ ರಚನೆ ಮೂಲಕವು ಜನ ಜಾಗೃತಿ ಮೂಡಿಸಿ ಎಲ್ಲ ಸಮಾಜಗಳ ಆಸ್ತಿಯಾಗಿದ್ದಾರೆ. ಅವರ ತತ್ವ ಮತ್ತು ಸಂದೇಶಗಳನ್ನು ಪಾಲಿಸೋಣ ಎಂದು ಹೇಳಿದರು.

ತಹಸೀಲ್ದಾರ್ ಪೂರ್ಣಿಮಾ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬೋಗಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್, ತಾ.ಪಂ.ಇಒ ಪ್ರವೀಣ್, ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್‌, ಬೀರೂರು ಪುರಸಭಾಧ್ಯಕ್ಷೆ ವನಿತಾ ಮಧು, ಜಿ.ಪಂ. ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಕೆ. ಎಚ್.ಎ. ಪ್ರಸನ್ನ, ಗೋಪಿಕುಮಾರ್, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್, ಈರಳ್ಳಿರಮೇಶ್, ಮನುಮರುಗುದ್ದಿ, ಯಾಸೀನ್, ಸವಿತಾ ರಮೇಶ್ ಅನೇಕ ಮುಖಂಡರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಕುರುಬ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.